ಕುಸ್ತಿಪಟುಗಳ ಆಯ್ಕೆ ಟ್ರಯಲ್ ನಡೆಸುವ ಅಧಿಕಾರ ಫೆಡರೇಶನ್‌ಗೆ ಇಲ್ಲ : ದಿಲ್ಲಿ ಹೈಕೋರ್ಟ್

Update: 2024-10-05 21:35 IST
ಕುಸ್ತಿಪಟುಗಳ ಆಯ್ಕೆ ಟ್ರಯಲ್ ನಡೆಸುವ ಅಧಿಕಾರ ಫೆಡರೇಶನ್‌ಗೆ ಇಲ್ಲ : ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್

  • whatsapp icon

ಹೊಸದಿಲ್ಲಿ : 2024ರ ಸೀನಿಯರ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗಾಗಿ ಭಾರತೀಯ ಸೀನಿಯರ್ ಕುಸ್ತಿ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಟ್ರಯಲ್‌ಗಳನ್ನು ನಡೆಸಲು ಸೆಪ್ಟಂಬರ್ 24ರಂದು ತಾನು ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವುದಾಗಿ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಶುಕ್ರವಾರ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.

ಭಾರತೀಯ ಕುಸ್ತಿ ಫೆಡರೇಶನ್‌ನ ವ್ಯವಹಾರಗಳನ್ನು ನಡೆಸಲು ನೇಮಿಸಲಾಗಿರುವ ತಾತ್ಕಾಲಿಕ ಸಮಿತಿಯ ಅಧಿಕಾರಗಳನ್ನು ಮರುಸ್ಥಾಪಿಸಿ ತಾನು ಆದೇಶವೊಂದನ್ನು ನೀಡಿರುವ ಹೊರತಾಗಿಯೂ, ಸುತ್ತೋಲೆಯನ್ನು ಹೊರಡಿಸಿರುವುದಕ್ಕಾಗಿ ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಫೆಡರೇಶನ್‌ಗೆ ಛೀಮಾರಿ ಹಾಕಿದ ಬಳಿಕ, ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವುದಾಗಿ ಫೆಡರೇಶನ್ ತಿಳಿಸಿತು. ಪಂದ್ಯಾವಳಿಗಳಿಗಾಗಿ ಕುಸ್ತಿಪಟುಗಳನ್ನು ಆಯ್ಕೆ ಮಾಡುವ ಟ್ರಯಲ್‌ಗಳನ್ನು ನಡೆಸುವ ಅಧಿಕಾರವನ್ನು ಹೈಕೋರ್ಟ್ ತಾತ್ಕಾಲಿಕ ಸಮಿತಿಗೆ ನೀಡಿತ್ತು.

ಭಾರತೀಯ ಕುಸ್ತಿ ಫೆಡರೇಶನ್‌ನ ವ್ಯವಹಾರಗಳನ್ನು ನಿಭಾಯಿಸಲು ಮತ್ತು ನಿಯಂತ್ರಿಸಲು ಅಂತರ್‌ರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ನೇಮಿಸಿರುವ ತಾತ್ಕಾಲಿಕ ಸಮಿತಿಯ ಅಧಿಕಾರಗಳನ್ನು ಆಗಸ್ಟ್ 16ರಂದು ಹೈಕೋರ್ಟ್ ಮರುಸ್ಥಾಪಿಸಿತ್ತು. ಸಮಿತಿಯ ವಿಸರ್ಜನೆಯು ‘‘ಅನಗತ್ಯವಾಗಿತ್ತು’’ ಮತ್ತು ‘‘ನಿಯಮಗಳಿಗೆ ಅನುಸಾರವಾಗಿಲ್ಲ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ತಾತ್ಕಾಲಿಕ ಸಮಿತಿಯ ವಿಸರ್ಜನೆಯು ಕೇಂದ್ರ ಕ್ರೀಡಾ ಸಚಿವಾಲಯದ 2023 ಡಿಸೆಂಬರ್ 24ರ ಆದೇಶಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಸಚಿನ್ ದತ್ತ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತ್ತು. ‘‘ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸುವ ನಿರ್ಧಾರಕ್ಕೆ ಕ್ರೀಡಾ ಸಚಿವಾಲಯದ ‘‘ಅನುಮೋದನೆ’’ ಇರುವಂತೆ ಕಂಡುಬರುತ್ತಿದೆ. ಯಾಕೆಂದರೆ ಅದು ವಿಸರ್ಜನೆ ನಿರ್ಧಾರಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ, ಪ್ರತಿಭಟನೆಯನ್ನೂ ನಡೆಸಿಲ್ಲ’’ ಎಂದು ನ್ಯಾಯಾಲಯ ಹೇಳಿತ್ತು.

ಶುಕ್ರವಾರ ತೀರ್ಪು ನೀಡಿದ ನ್ಯಾ. ಪ್ರತೀಕ್ ಜಲನ್, ‘‘ಆಯ್ಕೆ ಟ್ರಯಲ್‌ಗಳನ್ನು ನಡೆಸುವ ಅಧಿಕಾರವನ್ನು ಭಾರತೀಯ ಕುಸ್ತಿ ಫೆಡರೇಶನ್‌ನ ಚುನಾಯಿತಿ ಸಮಿತಿ ಹೊಂದಿಲ್ಲ. ಈ ರೀತಿಯಲ್ಲಿ ಅದನ್ನು ನೀವು ನಿಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಇಲ್ಲೊಂದು ನ್ಯಾಯಾಲಯದ ಆದೇಶವಿದೆ. ನ್ಯಾಯಾಲಯದ ಆದೇಶವನ್ನು ಈ ರೀತಿಯಲ್ಲಿ ಕಡೆಗಣಿಸುವಂತಿಲ್ಲ. ನ್ಯಾಯಾಲಯದ ಆದೇಶದೊಂದಿಗೆ ನಿಮಗೆ ಸಮಸ್ಯೆ ಇದೆ. ಆದೇಶವು ಹಗಲಿನ ಬೆಳಕಿನಷ್ಟೇ ಸ್ಪಷ್ಟವಾಗಿದೆ’’ ಎಂದು ಫೆಡರೇಶನ್‌ನ ವಕೀಲರನ್ನು ಉದ್ದೇಶಿಸುತ್ತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News