IPL 2025 | ರೋ'ಹಿಟ್' ಅಬ್ಬರಕ್ಕೆ ಮಗುಚಿ ಬಿದ್ದ 'ದೋನಿ' ಬಳಗ

PC | X@IPL
ಮುಂಬೈ, ಎ.20: ಏಕಪಕ್ಷೀಯವಾಗಿ ಸಾಗಿದ ಐಪಿಎಲ್ನ 38ನೇ ಪಂದ್ಯದಲ್ಲಿ ರೋಹಿತ್ ಶರ್ಮಾ(ಔಟಾಗದೆ 76, 45 ಎಸೆತ, 4 ಬೌಂಡರಿ,6 ಸಿಕ್ಸರ್)ಹಾಗೂ ಸೂರ್ಯಕುಮಾರ್ ಯಾದವ್(ಔಟಾಗದೆ 68 ರನ್, 30 ಎಸೆತ, 6 ಬೌಂಡರಿ,5 ಸಿಕ್ಸರ್)ಶತಕದ ಜೊತೆಯಾಟದ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿದೆ.
‘ಹ್ಯಾಟ್ರಿಕ್’ ಗೆಲುವು ದಾಖಲಿಸಿರುವ ಮುಂಬೈ ತಾನಾಡಿದ 8ನೇ ಪಂದ್ಯದಲ್ಲಿ 4ನೇ ಜಯ ದಕ್ಕಿಸಿಕೊಂಡಿದೆ.
ರವಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 177 ರನ್ ಗುರಿ ಪಡೆದ ಮುಂಬೈ ತಂಡವು 15.4 ಓವರ್ಗಳಲ್ಲಿ 1 ಕಳೆದುಕೊಂಡು ಗುರಿ ತಲುಪಿತು. ರಿಕೆಲ್ಟನ್(24 ರನ್)ಹಾಗೂ ರೋಹಿತ್ ಮೊದಲ ವಿಕೆಟ್ಗೆ 63 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರಿಕೆಲ್ಟನ್ ಔಟಾದ ನಂತರ ರೋಹಿತ್ ಹಾಗೂ ಸೂರ್ಯಕುಮಾರ್ 2ನೇ ವಿಕೆಟ್ನಲ್ಲಿ ಮುರಿಯದ ಜೊತೆಯಾಟದಲ್ಲಿ 54 ಎಸೆತಗಳಲ್ಲಿ 114 ರನ್ ಸೇರಿಸಿ ಇನ್ನೂ 26 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ರೋಹಿತ್ 33 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ನೆರವಿನಿಂದ ಈ ವರ್ಷದ ಐಪಿಎಲ್ನಲ್ಲಿ ತನ್ನ ಮೊದಲ ಅರ್ಧಶತಕ ಗಳಿಸಿದರು. ಸೂರ್ಯಕುಮಾರ್ ಕೇವಲ 26 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಲದಿಂದ 50 ರನ್ ಪೂರೈಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಸಿಎಸ್ಕೆ ತಂಡ ಆಲ್ರೌಂಡರ್ಗಳಾದ ರವೀಂದ್ರ ಜಡೇಜ(ಔಟಾಗದೆ 53, 35 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ಶಿವಂ ದುಬೆ(50 ರನ್, 32 ಎಸೆತ, 2 ಬೌಂಡರಿ,4 ಸಿಕ್ಸರ್)ಅರ್ಧಶತಕಗಳ ಹೊರತಾಗಿಯೂ 5 ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ ವಿಕೆಟನ್ನು ಸಿಎಸ್ಕೆ ಬೇಗನೆ ಕಳೆದುಕೊಂಡಿತು. ಆಗ ಜೊತೆಯಾದ ಶೇಕ್ ರಶೀದ್(19 ರನ್,20 ಎಸೆತ)ಹಾಗೂ 17ರ ಬಾಲಕ ಆಯುಷ್ ಮ್ಹಾತ್ರೆ(32 ರನ್,15 ಎಸೆತ)2ನೇ ವಿಕೆಟ್ಗೆ 41 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಆಯುಷ್ ಹಾಗೂ ರಶೀದ್ ಬೆನ್ನುಬೆನ್ನಿಗೆ ಔಟಾದರು. ಶಿವಂ ದುಬೆ ಹಾಗೂ ಜಡೇಜ 4ನೇ ವಿಕೆಟ್ಗೆ 79 ರನ್ ಜೊತೆಯಾಟ ನಡೆಸಿ ಸಿಎಸ್ಕೆ 5 ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಲು ನೆರವಾದರು. ಟ್ರೆಂಟ್ ಬೌಲ್ಟ್ ಎಸೆದ ಕೊನೆಯ ಓವರ್ನಲ್ಲಿ ಸಿಕ್ಸರ್, ಬೌಂಡರಿ ಗಳಿಸಿದ ಜಡೇಜ 34 ಎಸೆತಗಳಲ್ಲಿ ತನ್ನ ಅರ್ಧಶತಕ ಪೂರೈಸಿದರು.
ಸಂಕ್ಷಿಪ್ತ ಸ್ಕೋರ್
ಸಿಎಸ್ಕೆ: 20 ಓವರ್ಗಳಲ್ಲಿ 176/5
(ರವೀಂದ್ರ ಜಡೇಜ ಔಟಾಗದೆ 53, ಶಿವಂ ದುಬೆ 50, ಆಯುಷ್ ಮ್ಹಾತ್ರೆ 32, ಬುಮ್ರಾ 2-25)
ಮುಂಬೈ ಇಂಡಿಯನ್ಸ್: 15.4 ಓವರ್ಗಳಲ್ಲಿ 177/1
(ರೋಹಿತ್ ಶರ್ಮಾ ಔಟಾಗದೆ 76, ಸೂರ್ಯಕುಮಾರ್ ಔಟಾಗದೆ 68, ಜಡೇಜ 1-28)