ಮುಂಬೈ ವಿರುದ್ಧದ ಸೋಲಿನ ಬಳಿಕ ಧೋನಿ ಪಡೆಯ ಪ್ಲೇ ಆಫ್ ಹಾದಿ ಕಠಿಣ

PC: x.com/CricketNDTV
ಮುಂಬೈ: ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದ ಬಳಿಕವೂ ಚೆನ್ನೈ ಸೂಪರ್ ಕಿಂಗ್ಸ್ ನ ಪ್ಲೇ ಆಫ್ ಹಾದಿ ಮುಚ್ಚಿಲ್ಲ. ಆದರೆ ನಾಕೌಟ್ ಹಂತಕ್ಕೆ ತಲುಪುವ ಹಾದಿ ಮತ್ತಷ್ಟು ಕಠಿಣವಾಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ಅವರ ಅರ್ಧಶತಕಗಳ ನೆರವಿನಿಂದ ಸಿಎಸ್ ಕೆ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಆದಾಗ್ಯೂ ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್ ಸುಲಭ ಗೆಲುವು ದಾಖಲಿಸಿತು. ಈ ಸೋಲಿನೊಂದಿಗೆ ಧೋನಿ ಪಡೆ ಪಾಯಿಂಟ್ ಪಟ್ಟಿಯಲ್ಲಿ ಕೇವಲ 4 ಅಂಕಗಳೊಂದಿಗೆ ಕಟ್ಟಕಡೆಯ ಸ್ಥಾನದಲ್ಲಿದೆ. ಇದರಿಂದಾಗಿ 2025ರ ಐಪಿಎಲ್ ನಲ್ಲಿ ಪ್ಲೇಆಫ್ ತಲುಪಲು ಇನ್ನು ಉಳಿದಿರುವ ಎಲ್ಲ ಆರು ಪಂದ್ಯಗಳನ್ನು ಗೆಲ್ಲಬೇಕು ಮತ್ತು ಇತರ ತಂಡಗಳಿಂದ ಅನುಕೂಲಕರ ಫಲಿತಾಂಶ ಪಡೆಯಬೇಕು.
ಏಳು ಪಂದ್ಯಗಳಲ್ಲಿ 5ನ್ನು ಗೆದ್ದಿರುವ ಗುಜರಾತ್ ಟೈಟನ್ಸ್ 10 ಅಂಕ ಸಂಪಾದಿಸಿ ನಿವ್ವಳ 0.984 ರನ್ ರೇಟ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಅಷ್ಟೇ ಪಂದ್ಯಗಳಿಂದ 10 ಅಂಕ ಸಂಪಾದಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ರನ್ ರೇಟ್ ಆಧಾರದಲ್ಲಿ (0.589) ಎರಡನೇ ಸ್ಥಾನದಲ್ಲಿದೆ ಮತ್ತು ಆರ್ ಸಿಬಿ ಕೂಡಾ 10 ಅಂಕ ಪಡೆದಿದ್ದು, 0.472 ನಿವ್ವಳ ರನ್ ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಪಂಜಾಬ್ ಕಿಂಗ್ಸ್ ಎಂಟು ಪಂದ್ಯಗಳಿಂದ ಹತ್ತು ಅಂಕ ಕಲೆ ಹಾಕಿದ್ದು 0.177 ರನ್ ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿ, ಎಲ್ಎಸ್ ಜಿ ಎಂಟು ಪಂದ್ಯಗಳಿಂದ 0.088 ನಿವ್ವಳ ರನ್ ರೇಟ್ ಗಳೊಂದಿಗೆ 10 ಅಂಕ ಸಂಪಾದಿಸಿದೆ. ಮುಂಬೈ ಇಂಡಿಯನ್ಸ್ ಆಡಿದ ಎಂಟು ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆದ್ದು ಎಂಟು ಅಂಕ ಸಂಪಾದಿಸಿ ಆರನೇ ಸ್ಥಾನದಲ್ಲಿದೆ.