ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಪ್ರಕರಣ: ಮೌನ ಮುರಿದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ

ಅಮಿತ್ ಮಿಶ್ರಾ | PTI
ಹೊಸದಿಲ್ಲಿ: ತನ್ನ ಪತ್ನಿ ದಾಖಲಿಸಿರುವ ಕೌಟುಂಬಿಕ ಹಿಂಸೆ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ವರದಿಯನ್ನು ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಸಂಪೂರ್ಣ ತಳ್ಳಿ ಹಾಕಿದ್ದಾರೆ.
ವರದಿಗಳ ಪ್ರಕಾರ, ಮಿಶ್ರಾ ಅವರ ಪತ್ನಿ 1 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ಮದುವೆಯ ಸಮಯದಲ್ಲಿ ಮಿಶ್ರಾ ಕುಟುಂಬವು 10 ಲಕ್ಷ ರೂ. ಹಾಗೂ ಕಾರನ್ನು ನೀಡಬೇಕೆಂದು ಬೇಡಿಕೆ ಇಟ್ಟಿತ್ತು ಎಂದು ಆಕೆ ಆರೋಪಿಸಿದ್ದಾರೆ.
ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ 42ರ ವಯಸ್ಸಿನ ಮಿಶ್ರಾ, ಸಂಬಂಧವಿಲ್ಲದ ಸುದ್ದಿಗಳಿಗೆ ತಮ್ಮ ಹೆಸರು ಹಾಗೂ ಚಿತ್ರಗಳನ್ನು ಬಳಸಿದರೆ, ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
‘‘ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ನಾನು ಯಾವಾಗಲೂ ಪತ್ರಿಕಾ ಮಾಧ್ಯಮವನ್ನು ಗೌರವಿಸುತ್ತೇನೆ. ಆದರೆ ಸುದ್ದಿ ನಿಖರವಾಗಿರಬಹುದಾದರೂ, ಬಳಸಿರುವ ಛಾಯಾಚಿತ್ರ ನನ್ನದು. ಅದು ಸಂಪೂರ್ಣ ತಪ್ಪು. ಸಂಬಂಧವಿಲ್ಲದ ವಿಷಯಗಳಿಗೆ ನನ್ನ ಚಿತ್ರ ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ನಾನು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ಮಿಶ್ರಾ ಎಕ್ಸ್‌ನಲ್ಲಿ ಬರೆದಿದ್ದಾರೆ.
ಹಿರಿಯ ಸ್ಪಿನ್ನರ್ ಮಿಶ್ರಾ ಭಾರತ ಕ್ರಿಕೆಟ್ ತಂಡದ ಪರ 22 ಟೆಸ್ಟ್, 36 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 76, 64 ಹಾಗೂ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 4 ಅರ್ಧಶತಕಗಳನ್ನೂ ಗಳಿಸಿದ್ದಾರೆ.
ಐಪಿಎಲ್ ವೃತ್ತಿಜೀವನದಲ್ಲಿ ಮಿಶ್ರಾ 4 ಫ್ರಾಂಚೈಸಿಗಳ ಪರ ಆಡಿದ್ದರು. ಈ ಹಿಂದೆ ಆಡುತ್ತಿದ್ದ ಡೆಕ್ಕನ್ ಚಾರ್ಜರ್ಸ್ ತಂಡವಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ಪರ ಆಡಿದ್ದಾರೆ.
162 ಐಪಿಎಲ್ ಪಂದ್ಯಗಳಲ್ಲಿ 7.37ರ ಇಕಾನಮಿ ರೇಟ್‌ನಲ್ಲಿ 174 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ವಿವಿಧ ತಂಡಗಳ ವಿರುದ್ಧ ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.