ಸವಾಲು ಮೆಟ್ಟಿ ನಿಲ್ಲುವುದೇ ಇಂಗ್ಲೆಂಡ್ ?

Update: 2023-10-27 14:44 GMT

Photo: cricketworldcup.com

ಹೊಸದಿಲ್ಲಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ನಿರಂತರ ಸೋಲುಗಳಿಂದ ಕಂಗೆಟ್ಟಿದೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಇಂಗ್ಲೆಂಡ್ ನ ಈ ಅನಿರೀಕ್ಷಿತ ಕಳಪೆ ಪ್ರದರ್ಶನ ಹಾಲಿ ಚಾಂಪಿಯನ್ ತಂಡದ ಸೆಮೀಸ್ ಹಾದಿಯನ್ನೂ ಕಠಿಣಗೊಳಿಸಿದೆ. ಅದೀಗ ಮುಂದಿನ ಎಲ್ಲಾ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿಕೊಂಡಿದೆ.

ಏಕದಿನ ವಿಶ್ವಕಪ್ ತನ್ನಲ್ಲಿಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ 9 ವಿಕೆಟ್ ಹೀನಾಯ ಸೋಲು ಕಂಡ ಇಂಗ್ಲೆಂಡ್, ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 137 ರನ್ ಗಳಿಂದ ಸೋಲಿಸಿ ಲಯಕ್ಕೆ ಮರಳಿತು. ಆದರೆ ಆಮೇಲೆ ಆಫ್ಘಾನಿಸ್ತಾನ ವಿರುದ್ಧ 66 ರನ್, ದಕ್ಷಿಣ ಆಫ್ರಿಕಾ ವಿರುದ್ಧ 229, ಹಾಗೂ ಶ್ರೀಲಂಕಾ ವಿರುದ್ಧ 8 ವಿಕೆಟ್ ಗಳಿಂದ ಸೋಲುವ ಮೂಲಕ ಇಂಗ್ಲೆಂಡ್ ಗೆ ಟೂರ್ನಿಯಿಂದ ಹೊರ ಬೀಳುವ ಆತಂಕ ಎದುರಾಗಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ನ ಕಳಪೆ ಪ್ರದರ್ಶನಕ್ಕೆ ಕಾರಣಗಳು ಹಲವು.

ಬ್ಯಾಟಿಂಗ್ ವೈಫಲ್ಯ:

ಕಳೆದ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಬ್ಯಾಟರ್ ಗಳು ಈ ಬಾರಿ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಆರಂಭಿಕ ಆಟಗಾರರಾದ ಜಾನ್ನಿ ಬೈರ್ ಸ್ಟೋವ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲು ವಿಫಲರಾಗುತ್ತಿದ್ದಾರೆ. ಅನುಭವಿ ಜೊ ರೂಟ್, ನಾಯಕ ಜೋಸ್ ಬಟ್ಲರ್ ತಂಡಕ್ಕೆ ನೆರವಾಗುತ್ತಿಲ್ಲ. ಅಲ್ಲದೇ ಕಳೆದ ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ ನಿವೃತ್ತಿ ಹಿಂಪಡೆದು ತಂಡ ಸೇರಿಕೊಂಡರೂ ಗಾಯದ ಕಾರಣ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಅವರು ಕೂಡ ತಮ್ಮ ಹಳೆ ಆಟ ಪ್ರದರ್ಶಿಸುತ್ತಿಲ್ಲ.

ನಿರೀಕ್ಷಿತ ಪ್ರದರ್ಶನ ತೋರದ ಆಲ್ ರೌಂಡರ್ಸ್:

ಇಂಗ್ಲೆಂಡ್ ತಂಡದ ಪ್ರಮುಖ ಶಕ್ತಿಯಾಗಿದ್ದ ಆಲ್ ರೌಂಡರ್ ಆಟಗಾರರಾದ ಸ್ಯಾಮ್ ಕರಣ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಲಿಯಾಮ್ ಲಿವಿಂಗ್ ಸ್ಟೋನ್, ಕ್ರಿಸ್ ವೋಕ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ನಿರಂತರ ಹಿನ್ನಡೆ ಅನುಭವಿಸುತ್ತಿದ್ದಾರೆ.

ಬೌಲಿಂಗ್ ನಲ್ಲಿ ಕಮಾಲ್ ಮಾಡದ ವೇಗಿಗಳು ಹಾಗೂ ಸ್ಪಿನ್ನರ್ ಗಳು:

ತಂಡದಲ್ಲಿ ಆರಂಭಿಕ ಓವರ್ ಗಳಲ್ಲಿ ವಿಕೆಟ್ ತೆಗಿಯಬಲ್ಲ ವೇಗಿಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೋಫ್ರ ಆರ್ಚರ್ ಗಾಯದಿಂದ ಇನ್ನೂ ಚೇತರಿಕೊಂಡಿಲ್ಲ. ಬೌಲಿಂಗ್ ಮುನ್ನಡೆಸುತ್ತಿರುವ ಮಾರ್ಕ್ ವುಡ್ ತಮ್ಮ ನೈಜ ಆಟ ಆಡುತ್ತಿಲ್ಲ. ಸ್ಯಾಮ್ ಕರಣ್ ಬೌಲಿಂಗ್ ನಲ್ಲಿ ಹೆಚ್ಚು ರನ್ ಬಿಟ್ಟು ಕೊಡುತ್ತಿದ್ದಾರೆ. ಅಲ್ಲದೇ ತಂಡದ ಪ್ರಮುಖ ಸ್ಪಿನ್ನರ್ ಗಳಾದ ಮೊಯೀನ್ ಅಲಿ, ಅದಿಲ್ ರಶೀದ್ ಮಧ್ಯಮ ಓವರ್ ಗಳಲ್ಲಿ ದುಬಾರಿಯಾಗುತ್ತಿದ್ದಾರೆ.

ಜೋಸ್ ಬಟ್ಲರ್ ನಾಯಕತ್ವ, ಯುವ ಬ್ಯಾಟರ್ ಗಳ ಕೊರತೆ:

ತಂಡದ ನಾಯಕತ್ವ ವಹಿಸಿಕೊಂಡಿರುವ ಜೋಸ್ ಬಟ್ಲರ್ ಟಿ20 ಪಂದ್ಯಾವಳಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ತಮ್ಮ ನಾಯಕತ್ವ ವನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಆದರೆ ಏಕದಿನ ಮಾದರಿಯಲ್ಲಿ ಅವರ ನಾಯಕತ್ವ ಪ್ರಶ್ನಾರ್ಹವಾಗಿದೆ. ಅಲ್ಲದೇ ತಂಡವನ್ನು ಗೆಲ್ಲಿಸಬಲ್ಲ ಯಂಗ್ ಬ್ಯಾಟರ್ ಹ್ಯಾರಿ ಬ್ರೂಕ್ ಹೊರತು ಪಡಿಸಿ ಬೇರೆ ಯಾರು ತಂಡದಲ್ಲಿಲ್ಲ.

ಮ್ಯಾಜಿಕ್ ಮಾಡದ ಐಪಿಎಲ್ ಹುಲಿಗಳು:

ಇಂಗ್ಲೆಂಡ್ ತಂಡದ ಬಹುತೇಕ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಮುಖಾಂತರ ಭಾರತದ ನೆಲದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ 2022 ರ ಐಪಿಎಲ್ ನಲ್ಲಿ ದಾಖಲೆಯ ನಾಲ್ಕು ಶತಕ ಸೇರಿದಂತೆ ಋತುವಿನ ಟಾಪ್ ರನ್ ಸ್ಕೋರರ್ ಆಗಿದ್ದರು. ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಸ್ಯಾಮ್ ಕರಣ್ ಪ್ರಸಕ್ತ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಸಿಎಸ್ ಕೆ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದ ಮೊಯೀನ್ ಅಲಿ 2023 ರಲ್ಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದ ನೆಲದಲ್ಲಿ ಜಾನ್ನಿ ಬೈರ್ ಸ್ಟೋವ್, ಆದಿಲ್ ರಶೀದ್ ಅಂಕಿ-ಅಂಶ ಉತ್ತಮವಾಗಿಯೇ ಇದೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ತಲ್ಹತ್ ವಳಾಲ್

contributor

Similar News