ಟಿ20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ: ಆರ್ಚರ್ ವಾಪಸ್, ಬಟ್ಲರ್ ಗೆ ನಾಯಕತ್ವ
ಲಂಡನ್: ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗಾಗಿ ಮಂಗಳವಾರ ಪ್ರಕಟಿಸಿರುವ ತಾತ್ಕಾಲಿಕ ತಂಡದಲ್ಲಿ ಜೋಫ್ರಾ ಆರ್ಚರ್ ಆಯ್ಕೆಯಾಗಿದ್ದಾರೆ. ವೃತ್ತಿಜೀವನದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪ್ರಮುಖ ಬೌಲರ್ ಪೈಕಿ ಒಬ್ಬರಾಗಿರುವ ಆರ್ಚರ್ ಬಹುನಿರೀಕ್ಷಿತ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ.
ಬಲಮೊಣಕೈಗೆ ಆಗಿರುವ ಗಾಯಕ್ಕೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ 29ರ ಹರೆಯದ ಆರ್ಚರ್ 2021ರಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದಿಂದ ದೂರವೇ ಉಳಿದಿದ್ದರು. ಬೆನ್ನುನೋವಿನಿಂದಾಗಿ 2022ರಲ್ಲಿ ಹೆಚ್ಚಿನ ಪಂದ್ಯಗಳಿಂದ ಹೊರಗುಳಿದಿದ್ದರು.
ಬಾರ್ಬಡೋಸ್ ಸಂಜಾತ ವೇಗದ ಬೌಲರ್ ಆರ್ಚರ್ ತನ್ನ ಪೌರತ್ವವನ್ನು ಬದಲಿಸಿಕೊಂಡ ನಂತರ 2019ರ ಕ್ರಿಕೆಟ್ ವಿಶ್ವಕಪ್ ಗೆ ಮೊದಲು ಇಂಗ್ಲೆಂಡ್ ಪರ ಆಡಲು ಅರ್ಹತೆ ಪಡೆದಿದ್ದರು. ಪಾಕಿಸ್ತಾನ ವಿರುದ್ಧ ನಡೆಯುವ 4 ಪಂದ್ಯಗಳ ಟಿ20 ಸರಣಿ ಹಾಗೂ ಆನಂತರದ ವಿಶ್ವಕಪ್ ನಲ್ಲಿ ಆರ್ಚರ್ ಫಿಟ್ ಇರಲಿದ್ದಾರೆ ಎಂದು ಇಂಗ್ಲೆಂಡ್ ವಿಶ್ವಾಸ ವ್ಯಕ್ತಪಡಿಸಿದೆ.
ಇಂಗ್ಲೆಂಡ್ ತಂಡ ಬಾರ್ಬಡೋಸ್ ನಲ್ಲಿ ಜೂನ್ 4ರಂದು ಸ್ಕಾಟ್ಲ್ಯಾಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಸದ್ಯ ಐಪಿಎಲ್ನಲ್ಲಿ ಮಿಂಚುತ್ತಿರುವ ಜಾನಿ ಬೈರ್ಸ್ಟೋವ್ ಹಾಗೂ ವಿಲ್ ಜಾಕ್ಸ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ನಾಯಕತ್ವವಹಿಸಿದ್ದು, ಆಂಗ್ಲರು ಮೂರನೇ ಬಾರಿ ಟಿ20 ವಿಶ್ವಕಪ್ ಜಯಿಸಲು ಬಯಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡ: ಜೋಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸಿ ಟೋಪ್ಲೆ ಹಾಗೂ ಮಾರ್ಕ್ ವುಡ್.