ಎಫ್‌ಐಎಚ್ ಹಾಕಿ5ಎಸ್ ಮಹಿಳಾ ವಿಶ್ವಕಪ್ ; ದಕ್ಷಿಣ ಆಫ್ರಿಕವನ್ನು ಸೋಲಿಸಿ ಭಾರತ ಫೈನಲ್‌ಗೆ

Update: 2024-01-27 17:42 GMT

(Photo Credit: Twitter /@TheHockeyIndia)

ಮಸ್ಕತ್ : ಒಮಾನ್ ರಾಜಧಾನಿ ಮಸ್ಕತ್‌ನಲ್ಲಿ ನಡೆಯುತ್ತಿರುವ ಎಫ್‌ಐಎಚ್ ಹಾಕಿ5ಎಸ್ ಮಹಿಳಾ ವಿಶ್ವಕಪ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕವನ್ನು 6-3 ಗೋಲುಗಳ ಭರ್ಜರಿ ಅಂತರದಿಂದ ಸೋಲಿಸಿ ಫೈನಲ್ ತಲುಪಿದೆ.

ಶುಕ್ರವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ, ಭಾರತದ ಪರವಾಗಿ ಅಕ್ಷತಾ ಅಬಾಸೊ ದೇಕಲೆ 7ನೇ ನಿಮಿಷದಲ್ಲಿ, ಮರಿಯಾನಾ ಕುಜೂರ್ 11ನೇ ನಿಮಿಷದಲ್ಲಿ, ಮಮ್ತಾಝ್ ಖಾನ್ 21ನೇ ನಿಮಿಷದಲ್ಲಿ, ರುತುಜಾ ದಾದಸೊ ಪಿಸಾಲ್ 23ನೇ ನಿಮಿಷದಲ್ಲಿ, ಜ್ಯೋತಿ ಛಾತ್ರಿ 25ನೇ ನಿಮಿಷದಲ್ಲಿ ಮತ್ತು ಅಜಿಮಾ ಕುಜೂರ್ 26ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

ದಕ್ಷಿಣ ಆಫ್ರಿಕದ ಪರವಾಗಿ ಟೆಶಾನ್ ಡಿ ಲಾ ರೆ 5ನೇ ನಿಮಿಷದಲ್ಲಿ, ನಾಯಕಿ ಟೋನಿ ಮಾರ್ಕ್ಸ್ 8ನೇ ನಿಮಿಷದಲ್ಲಿ ಮತ್ತು ಡರ್ಕೀ ಶಾಂಬರ್‌ಲೇನ್ 29ನೇ ನಿಮಿಷದಲ್ಲಿ ಗೋಲುಗಳನ್ನು ಗಳಿಸಿದರು.

ದಕ್ಷಿಣ ಆಫ್ರಿಕವು ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟವನ್ನು ಆಡಿತು. ಪಂದ್ಯದ ಮೊದಲ ಗೋಲನ್ನು ದಕ್ಷಿಣ ಆಫ್ರಿಕ ಬಾರಿಸಿತು. ತನ್ನ ಗೋಲಿನ ಮೂಲಕ ಟೆಶಾನ್ ಡಿ ಲಾ ರೆ ತಂಡಕ್ಕೆ ಆರಂಭಿಕ ಮುನ್ನಡೆಯನ್ನು ಒದಗಿಸಿದರು. ಆದರೆ, ಆ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. ಶೀಘ್ರವೇ ಅಕ್ಷತಾ ಭಾರತದ ಪರವಾಗಿ ಗೋಲು ಬಾರಿಸಿ ಅಂಕಪಟ್ಟಿಯನ್ನು ಸಮಗೊಳಿಸಿದರು.

ದಕ್ಷಿಣ ಆಫ್ರಿಕ ಗೋಲುಗಳನ್ನು ಬಾರಿಸುತ್ತಾ ಹೋದಂತೆ, ಭಾರತ ಪ್ರತಿಗೋಲುಗಳನ್ನು ಬಾರಿಸುತ್ತಿತ್ತು. ರವಿವಾರ ನಡೆಯುವ ಫೈನಲ್‌ನಲ್ಲಿ ಭಾರತವು ನೆದರ್‌ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News