ಎಫ್‌ಐಎಚ್ ಹಾಕಿ ಪ್ರೊ ಲೀಗ್ | ಒಲಿಂಪಿಕ್ ಚಾಂಪಿಯನ್ ನೆದರ್‌ಲ್ಯಾಂಡ್ಸನ್ನು ಶೂಟೌಟ್‌ ನಲ್ಲಿ ಮಣಿಸಿದ ಭಾರತೀಯ ಮಹಿಳೆಯರು

Update: 2025-02-25 23:16 IST
ಎಫ್‌ಐಎಚ್ ಹಾಕಿ ಪ್ರೊ ಲೀಗ್ | ಒಲಿಂಪಿಕ್ ಚಾಂಪಿಯನ್ ನೆದರ್‌ಲ್ಯಾಂಡ್ಸನ್ನು ಶೂಟೌಟ್‌ ನಲ್ಲಿ ಮಣಿಸಿದ ಭಾರತೀಯ ಮಹಿಳೆಯರು

Photo Credit | X/@FIH_Hockey

  • whatsapp icon

ಭುವನೇಶ್ವರ : ಎಫ್‌ಐಎಚ್ ಪ್ರೊ ಲೀಗ್ ಪಂದ್ಯಾವಳಿಯ ಮಂಗಳವಾರ ನಡೆದ ತವರಿನ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಹಾಲಿ ಒಲಿಂಪಿಕ್ ಚಾಂಪಿಯನ್ ಹಾಗೂ ಒಂದನೇ ವಿಶ್ವ ರಾಂಕಿಂಗ್‌ ನ ನೆದರ್‌ಲ್ಯಾಂಡ್ಸ್ ತಂಡವನ್ನು ಶೂಟೌಟ್‌ನಲ್ಲಿ ಸೋಲಿಸಿದೆ. ಇದರೊಂದಿಗೆ, ಅದು ಪಂದ್ಯಗಳ ತವರಿನ ಹಂತವನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2-2 ಗೋಲಿನೊಂದಿಗೆ ಸಮಬಲದಲ್ಲಿದ್ದಾಗ ಶೂಟೌಟ್ ಅನಿವಾರ್ಯವಾಯಿತು.

ಅರ್ಧಾವಧಿಯಲ್ಲಿ ನೆದರ್‌ಲ್ಯಾಂಡ್ಸ್ 2-0 ಅಂತರದಿಂದ ಮುಂದಿತ್ತು. ಆ ತಂಡದ ಪರವಾಗಿ ಪಿಯನ್ ಸ್ಯಾಂಡರ್ಸ್ 17ನೇ ನಿಮಿಷದಲ್ಲಿ ಮತ್ತು ಫಾಯ್ ವಾನ್ ಡರ್ ಎಲಸ್ಟ್ 28ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

ಆದರೆ, ದ್ವಿತೀಯಾರ್ಧದಲ್ಲಿ ಭಾರತವು ತೀವ್ರ ಪ್ರತಿಹೋರಾಟ ನೀಡಿತು ಹಾಗೂ ಎರಡು ಗೋಲುಗಳನ್ನು ಬಾರಿಸಿ ಅಂಕಪಟ್ಟಿಯನ್ನು ಸಮಬಲಗೊಳಿಸಿತು. ಭಾರತದ ಪರವಾಗಿ ದೀಪಿಕಾ 35ನೇ ನಿಮಿಷದಲ್ಲಿ ಮತ್ತು ಬಲ್ಜೀತ್ ಕೌರ್ 43ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.

ಬಳಿಕ ನಡೆದ ಶೂಟೌಟ್‌ ನಲ್ಲಿ, ಭಾರತದ ಪರವಾಗಿ ದೀಪಿಕಾ ಮತ್ತು ಮಮ್ತಾಝ್ ಖಾನ್ ಗೋಲುಗಳನ್ನು ಬಾರಿಸಿದರು. ಆದರೆ, ನೆದರ್‌ಲ್ಯಾಂಡ್ಸ್ ಪರವಾಗಿ ಮರೀಯ್ನ್ ವೀನ್‌ಗೆ ಮಾತ್ರ ಗೋಲು ಬಾರಿಸಲು ಸಾಧ್ಯವಾಯಿತು.

ಭಾರತೀಯ ಗೋಲ್‌ಕೀಪರ್ ಸವಿತಾ ಪೂನಿಯ ನಾಲ್ಕು ಗೋಲುಗಳನ್ನು ತಡೆದು ತಂಡದ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದರು.

ಫೆಬ್ರವರಿ 15ರಿಂದ ಭಾರತದಲ್ಲಿ ಎಂಟು ಪಂದ್ಯಗಳನ್ನು ಆಡಲಾಗಿದೆ. ಆ ಪೈಕಿ ಭಾರತ ಮೂರರಲ್ಲಿ ಗೆದ್ದರೆ, ನೆದರ್‌ಲ್ಯಾಂಡ್ಸ್ ಐದರಲ್ಲಿ ಗೆದ್ದಿದೆ.

ಭಾರತ ಈಗ ಎಫ್‌ಐಎಚ್ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 12 ಅಂಕಗಳನ್ನು ಗಳಿಸಿ ಐದನೇ ಸ್ಥಾನದಲ್ಲಿದೆ. ಹದಿನಾರು ಅಂಕಗಳನ್ನು ಗಳಿಸಿರುವ ಇಂಗ್ಲೆಂಡ್ ಅಗ್ರ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News