ಅಂತಿಮ ಟೆಸ್ಟ್: ಬುಮ್ರಾ-ಸ್ಯಾಮ್ ಕಾನ್‌ಸ್ಟಸ್ ಸಂಘರ್ಷ!
ಸಿಡ್ನಿ : ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವು ಕೆಲವೊಂದು ನಾಟಕೀಯದ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.
ದಿನದ ಆರಂಭದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಾಪಸಾಗುವುದನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಬಳಿಕ, ದಿನದಾಟದ ಕೊನೆಯ ವೇಳೆಗೆ ಭಾರತೀಯ ನಾಯಕ ಜಸ್‌ಪ್ರಿತ್ ಬುಮ್ರಾ ಮತ್ತು ಆಸ್ಟ್ರೇಲಿಯದ ಬ್ಯಾಟರ್ ಸ್ಯಾಮ್ ಕಾನ್‌ಸ್ಟಸ್ ನಡುವೆ ಮಾತಿನ ಚಕಮಕಿ ನಡೆಯಿತು.
ಜಸ್‌ಪ್ರಿತ್ ಬುಮ್ರಾ ಆಸ್ಟ್ರೇಲಿಯದ ಆರಂಭಿಕ ಉಸ್ಮಾನ್ ಖ್ವಾಜಾರಿಗೆ ಬೌಲ್ ಮಾಡುವುದಕ್ಕಾಗಿ ಓಟವನ್ನು ಆರಂಭಿಸಿದಾಗ, ತಾನಿನ್ನೂ ಸಿದ್ಧವಾಗಿಲ್ಲ ಎಂಬ ಸಂಜ್ಞೆಯನ್ನು ಬ್ಯಾಟರ್ ರವಾನಿಸಿದರು. ಆಗ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಕಾನ್‌ಸ್ಟಸ್ ಕೂಡ ಮಧ್ಯಪ್ರವೇಶಿಸಿ, ನಿಲ್ಲುವಂತೆ ಬುಮ್ರಾಗೆ ಸಂಜ್ಞೆ ಮಾಡಿದರು.
ಬುಮ್ರಾ ಮತ್ತು ಕಾನ್‌ಸ್ಟಸ್ ಆಕ್ರಮಣಕಾರಿ ರೀತಿಯಲ್ಲಿ ಮುಖಾಮುಖಿಯಾದಾಗ, ‘‘ಏನು ಸಮಸ್ಯೆ?’’ ಎಂಬುದಾಗಿ ಬುಮ್ರಾ ಕೇಳುವುದು ಕೇಳಿಸಿತು. ಆಗ ಅಂಪೈರ್ ತಕ್ಷಣ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದರು.
ಆದರೆ, ಅಂತಿಮ ಗೆಲುವು ಬುಮ್ರಾರದೇ ಆಗಿತ್ತು. ಬುಮ್ರಾ ಮುಂದಿನ ಎಸೆತದಲ್ಲೇ ಫುಲ್‌ಟಾಸ್ ಚೆಂಡೆಸೆದು ಖ್ವಾಜಾರ ವಿಕೆಟ್ ಉರುಳಿಸಿದರು. ಖ್ವಾಜಾ ನೀಡಿದ ಕ್ಯಾಚನ್ನು ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಪಡೆದರು.
ವಿಕೆಟ್ ಪಡೆದ ಸಂಭ್ರಮವನ್ನು ಆಚರಿಸುವ ಬದಲು ಬುಮ್ರಾ, ಕಾನ್‌ಸ್ಟಸ್‌ರತ್ತ ತಿರುಗಿ ತೀಕ್ಷ್ಣವಾಗಿ ದಿಟ್ಟಿಸಿ ನೋಡಿದರು.