ಬಿಸಿಸಿಐ ದ್ವಿಮುಖ ನೀತಿ ಪ್ರಶ್ನಿಸಿದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ

ವಿರಾಟ್ ಕೊಹ್ಲಿ | PC : X
ಹೊಸದಿಲ್ಲಿ: ಐಪಿಎಲ್ ವೇಳೆ ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಿದ್ದಕ್ಕೆ ಸಂಬಂಧಿಸಿ ಲಕ್ನೊ ಸೂಪರ್ ಜಯಂಟ್ಸ್ ಬೌಲರ್ ದಿಗ್ವೇಶ್ ಗೆ ದಂಡ ವಿಧಿಸಿರುವ ಬಿಸಿಸಿಐ, ವಿರಾಟ್ ಕೊಹ್ಲಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದ್ವಿಮುಖ ನೀತಿ ಅನುಸರಿಸಿದ್ದನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
ಚಂಡಿಗಡದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತಂಡವು 7 ವಿಕೆಟ್ ಗಳಿಂದ ಗೆದ್ದ ನಂತರ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್‌ರನ್ನು ಉದ್ದೇಶಿಸಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ನಡೆಸಿದ್ದರು. ಕೊಹ್ಲಿ ಈ ಋತುವಿನಲ್ಲಿ ತನ್ನ 4ನೇ ಅರ್ಧಶತಕವನ್ನು ಗಳಿಸಿ ಆರ್‌ಸಿಬಿ ಗೆ ಗೆಲುವು ತಂದುಕೊಟ್ಟಿದ್ದರು.
ಪಂದ್ಯವನ್ನು ಗೆದ್ದ ನಂತರ ಕೊಹ್ಲಿ ಅವರು ಅಯ್ಯರ್ ಸಮ್ಮುಖದಲ್ಲಿ ಸಂಭ್ರಮಾಚರಣೆ ನಡೆಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಲಕ್ನೊ ತಂಡದ ಬೌಲರ್ ದಿಗ್ವೇಶ್ ತನ್ನ ನೋಟ್ ಬುಕ್ ಸಂಭ್ರಮಕ್ಕಾಗಿ ಎರಡು ಪ್ರತ್ಯೇಕ ಸಂದರ್ಭದಲ್ಲಿ ದಂಡವನ್ನು ಪಾವತಿಸಿದ್ದಾರೆ. ಎ.1ರಂದು ಪಂಜಾಬ್ ಓಪನರ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ನೋಟ್‌ಬುಕ್ ಸೆಲೆಬ್ರೇಶನ್ ಮಾಡಿದ್ದಕ್ಕೆ ಶೇ.25ರಷ್ಟು ದಂಡ ತೆತ್ತು, ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದರು. ಮುಂಬೈ ಇಂಡಿಯನ್ಸ್ ನ ನಮನ್ ಧೀರ್ ರನ್ನು ಔಟ್ ಮಾಡಿ ಸಂಭ್ರಮಿಸಿದ್ದಕ್ಕೆ ಶೇ.50ರಷ್ಟು ದಂಡ ಪಾವತಿಸಿ ಇನ್ನೂ 2 ಡಿಮೆರಿಟ್ ಪಾಯಿಂಟ್ಸ್ ಪಡೆದಿದ್ದರು.
‘‘ದಿಗ್ವೇಶ್ ನೋಟ್ ಬುಕ್ ಸೆಲೆಬ್ರೇಶನ್ ಗೆ ಎರಡು ಬಾರಿ ದಂಡ ತೆರಬೇಕಾಯಿತು. ಮೂರನೇ ಬಾರಿ ಈ ರೀತಿ ಮಾಡಲು ಹೆದರಿದ್ದ ಆತ, ನಾನು ದಂಡದಲ್ಲಿ ಕಳೆದುಕೊಳ್ಳುವಷ್ಟು ಸಂಪಾದಿಸುತ್ತಿಲ್ಲ ಎಂದು ಹೇಳಿದ್ದಾರೆ’’ ಎಂದು ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
‘‘ಪಂಜಾಬ್-ಆರ್‌ಸಿಬಿ ನಡುವಿನ ಪಂದ್ಯದ ಅಂತ್ಯದಲ್ಲಿ ವಿರಾಟ್ ಕೊಹ್ಲಿ ಅವರ ಸಂಭ್ರಮಾಚರಣೆಯನ್ನು ನಾವು ನೋಡಿದ್ದೇವೆ. ಅದು ಕೂಡ ಶುದ್ದ ಆಕ್ರಮಣಶೀಲತೆಯಿಂದ ಕೂಡಿತ್ತು. ಆದರೆ ಅವರಿಗೆ ಏನನ್ನೂ ಹೇಳಿಲಿಲ್ಲ. ಅವರಿಗೆ ದಂಡವನ್ನೂ ವಿಧಿಸಿಲ್ಲ. ಆದರೆ ದಿಗ್ವೇಶ್ ಗೆ ನೋಟ್‌ಬುಕ್ ಸೆಲೆಬ್ರೇಶನ್‌ಗೆ ದಂಡ ವಿಧಿಸಲಾಗಿದೆ’’ಎಂದು ಚೋಪ್ರಾ ಹೇಳಿದ್ದಾರೆ.