ಗೆಳೆತನ ಮೈದಾನದಿಂದ ಹೊರಗಿರಬೇಕೆಂಬ ಗಂಭೀರ್ ಹೇಳಿಕೆ ಸರಿಯಲ್ಲ: ಶಾಹಿದ್ ಅಫ್ರಿದಿ
ಲಾಹೋರ್: ಗೆಳೆತನವನ್ನು ಮೈದಾನದಿಂದ ಹೊರಗಿರಿಸಬೇಕು ಎಂಬ ಗೌತಮ್ ಗಂಭೀರ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕಟುವಾಗಿ ಪ್ರತಿಕ್ರಿಯಿಸಿದರು.
ಪಾಕಿಸ್ತಾನದ ಮಾಧ್ಯಮಗಳಿಗೆ ಅಫ್ರಿದಿ ನೀಡಿರುವ ಹೇಳಿಕೆಯನ್ನು ಎನ್‌ಡಿಟಿವಿ ವರದಿ ಮಾಡಿದೆ.
ಏಶ್ಯಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಆಟಗಾರರ ಸ್ನೇಹ-ಬಾಂಧವ್ಯದ ಕುರಿತು ಗಂಭೀರ್ ಪ್ರಶ್ನೆ ಎತ್ತಿದ್ದರು. ಮೈದಾನದಲ್ಲಿ ದೇಶದ ಪರ ಆಡುವಾಗ ಸ್ನೇಹವನ್ನು ಹೊರಗಿರಿಸಬೇಕು. ಆಕ್ರಮಣಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಗಂಭೀರ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಫ್ರಿದಿ, ಇದು ಅವರ(ಗಂಭೀರ್) ಆಲೋಚನೆ. ನಾನು ವಿಭಿನ್ನವಾಗಿ ಯೋಚಿಸುತ್ತೇನೆ. ನಾವು ಕ್ರಿಕೆಟಿಗರು, ರಾಯಭಾರಿಗಳೂ ಕೂಡ ಆಗಿದ್ದೇವೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದೇವೆ. ನಮ್ಮನ್ನು ಇಷ್ಟಪಡುವವರು ಎರಡೂ ಕಡೆ ಇರುತ್ತಾರೆ. ಆದ್ದರಿಂದ ಪ್ರೀತಿ ಹಾಗೂ ಗೌರವದ ಸಂದೇಶವನ್ನು ಕಳುಹಿಸುವುದು ಉತ್ತಮ ಎಂದು ಹೇಳಿದ್ದಾರೆ.
ಹಾಗೆಂದ ಮಾತ್ರಕ್ಕೆ ಮೈದಾನದಲ್ಲಿ ಆಕ್ರಮಣಶೀಲತೆ ಬೇಡ ಎಂದಲ್ಲ. ಆದರೆ ಮೈದಾನದ ಹೊರಗೂ ಜೀವನವಿದೆ. ನಮ್ಮ ನಮ್ಮ ದೇಶಗಳ ರಾಯಭಾರಿಗಳಾಗಿದ್ದೇವೆ ಎಂದು ಅಫ್ರಿದಿ ಹೇಳಿದ್ದಾರೆ.