ಏಕದಿನ ತಂಡದ ಆಯ್ಕೆಯಲ್ಲಿ ‘ಗೌತಮ್ ಗಂಭೀರ್ ಅಂಶ’!

Update: 2024-07-19 16:16 GMT

ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ| PTI 

ಮುಂಬೈ : ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ಆಡಲು ಶ್ರೀಲಂಕಾಗೆ ಹೋಗುವ ಭಾರತೀಯ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಗುರುವಾರ ಪ್ರಕಟಿಸಿದೆ. ಇದು ಬ್ಯಾಟರ್ ಸೂರ್ಯಕುಮಾರ್ ಯಾದವ್ ಪಾಲಿನ ಸಿಹಿ-ಕಹಿ ಕ್ಷಣವಾಗಿದೆ.

ಆಕ್ರಮಣಕಾರಿ ಬ್ಯಾಟರ್ ಸೂರ್ಯಕುಮಾರ್‌ರನ್ನು ಭಾರತೀಯ ಟಿ20 ತಂಡದ ನಾಯಕನಾಗಿ ನೇಮಿಸಲಾಗಿದೆ. ಇದು ಅವರ ಸಂಭ್ರಮದ ಕ್ಷಣವಾಗಿದೆ. ಆದರೆ, ಅದೇ ವೇಳೆ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ.

ಈ ಮೂಲಕ ಆಯ್ಕೆಗಾರರು ಮತ್ತು ತಂಡದ ನೂತನ ಪ್ರಧಾನ ಕೋಚ್ ಗೌತಮ್ ಗಾಂಭೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಭಾರತೀಯ ತಂಡದ ಭಾಗವಾಗಿದ್ದರು. ಆದರೆ, ಆಯ್ಕೆಗಾರರು ತನ್ನ ಮೇಲೆ ಇಟ್ಟಿದ್ದ ಭರವಸೆಯನ್ನು ಉಳಿಸಿಕೊಳ್ಳಲು ಅವರು ವಿಫಲರಾಗಿದ್ದರು. ಹಾಗಾಗಿಯೇ, ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಆಡುವ ಭಾರತೀಯ ತಂಡದಿಂದ ಅವರನ್ನು ಹೊರಗಿಡಲಾಗಿದೆ.

ಸೂರ್ಯಕುಮಾರ್ ಜಗತ್ತಿನ ಅತ್ಯುತ್ತಮ ಟಿ20 ಬ್ಯಾಟರ್ ಆಗಿರಬಹುದು, ಆದರೆ ಅವರ 50 ಓವರ್‌ಗಳ ಕ್ರಿಕೆಟ್‌ನ ಆಟದ ಬಗ್ಗೆ ಈ ಮಾತನ್ನು ಹೇಳುವಂತಿಲ್ಲ. ಅವರು 37 ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ 25.76ರ ಸರಾಸರಿ ಹೊಂದಿದ್ದಾರೆ. ತಾಳ್ಮೆಯಿಂದ ಆಡಿ, ಬಳಿಕ ನಿಧಾನವಾಗಿ ರನ್ ಗಳಿಕೆ ದರವನ್ನು ಹೆಚ್ಚಿಸುವ ಅವರ ಸಾಮರ್ಥ್ಯದ ಬಗ್ಗೆ ಹೆಚ್ಚಿನವರಿಗೆ ನಂಬಿಕೆಯಿಲ್ಲ.

ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭಾರತಕ್ಕೆ ಕೇವಲ ಆರು ಏಕದಿನ ಪಂದ್ಯಗಳನ್ನು ಆಡುವ ಅವಕಾಶವಿದೆ. ಹಾಗಾಗಿ, ಇತರ ಆಟಗಾರರಿಗೆ ಅವಕಾಶ ನೀಡಲು ಆಯ್ಕೆಗಾರರು ಬಯಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಲ್‌ರೌಂಡರ್ ನಿತೀಶ್ ರೆಡ್ಡಿಯನ್ನು ಈ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

ಅದೇ ವೇಳೆ, ಬಿಳಿ ಚೆಂಡಿನ ಕ್ರಿಕೆಟ್ (ಟಿ20 ಮತ್ತು ಏಕದಿನ)ನಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ಮುಂಚೂಣಿಯ ಸೀಮ್-ಬೌಲಿಂಗ್ ಆಲ್‌ರೌಂಡರ್ ಆಗಿ ಮುಂದುವರಿಯಲಿದ್ದಾರೆ. ಆದರೆ, ಅವರು ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ಹೊರಗಿರುತ್ತಾರೆ. ಆದರೆ, ಅವರು ಭವಿಷ್ಯದಲ್ಲಿ ಏಕದಿನ ಪಂದ್ಯಗಳಿಗೆ ಮರಳಬಹುದಾಗಿದೆ.

ಏಕದಿನ ತಂಡದ ನಾಯಕ ರೋಹಿತ್ ಶರ್ಮರಂತೆ, ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ಆಯ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅಂಕಿಸಂಖ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಹಾಗಾಗಿ, ಬಿಳಿ ಬಣ್ಣದ ಕ್ರಿಕೆಟ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ರವೀಂದ್ರ ಜಡೇಜ ಹೊರಗುಳಿದಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾದ ಭಾರತೀಯ ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಬ್‌ಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್, ರಾಹುಲ್ (ವಿಕೆಟ್‌ಕೀಪರ್), ರಿಶಭ್ ಪಂತ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್, ಶಿವಮ್ ದುಬೆ, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ವಾಶಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್ ಮತ್ತು ಹರ್ಷಿತ್ ರಾಣಾ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News