ಸತತ 2 ಎಸೆತಗಳಲ್ಲಿ ಟ್ರಾವಿಸ್ ಹೆಡ್ ಔಟ್ ಆದರೂ ಹಾರ್ದಿಕ್ ಪಾಂಡ್ಯಗೆ ವಿಕೆಟ್ ನಿರಾಕರಿಸಿದ್ದೇಕೆ ಗೊತ್ತೇ?

PC | ndtv
ಮುಂಬೈ : ಮುಂಬೈ ಇಂಡಿಯನ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಗುರುವಾರ ನಡೆದ ಐಪಿಎಲ್ ಕದನ ಕುತೂಹಲಕರ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಸನ್‍ರೈಸರ್ಸ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಸತತ ಎರಡು ಎಸೆತಗಳಲ್ಲಿ ಎರಡು ಬಾರಿ ಔಟ್ ಆದರೂ ಪಾಂಡ್ಯ ಅವರಿಗೆ ವಿಕೆಟ್ ನಿರಾಕರಿಸಲಾಯಿತು!
ಎಸ್‍ಆರ್‌ಎಚ್ ಇನಿಂಗ್ಸ್ ನ 10ನೇ ಓವರ್ ನಲ್ಲಿ ಪಾಂಡ್ಯ ಎಸೆತವನ್ನು ಹೆಡ್ ಹೊಡೆದಾಗ ಡೀಪ್‍ನಲ್ಲಿ ಕ್ಯಾಚ್ ಹಿಡಿಯಲಾಯಿತು. ಆದರೆ ಮುಂಬೈ ಇಂಡಿಯನ್ಸ್ ಅವರ ಸಂಭ್ರಮ ಅಲ್ಪಾಯುಷಿಯಾಯಿತು. ಸಣ್ಣ ಚರ್ಚೆಯ ಬಳಿಕ ಆನ್‍ಫೀಲ್ಡ್ ಅಂಪೈರ್ ಇದನ್ನು ನೋಬಾಲ್ ಎಂದು ಘೋಷಿಸಿದರು. ಫ್ರೀಹಿಟ್ ಆಗಿದ್ದ ಮುಂದಿನ ಎಸೆತದಲ್ಲಿ ಮತ್ತೆ ಹೆಡ್ ದೊಡ್ಡ ಹೊಡೆತಕ್ಕೆ ಮುಂದಾಗಿ ಲಾಂಗ್ ಆನ್‍ನಲ್ಲಿ ಮಿಚೆಲ್ ಸ್ಯಾಂಟ್ನರ್ ಗೆ ಕ್ಯಾಚ್ ನೀಡಿದರು.
ಎರಡು ಬಾರಿ ಔಟ್ ಮಾಡಿದರೂ ವಿಕೆಟ್ ಪಡೆಯಲು ಸಾಧ್ಯವಾಗದೇ ಇರುವ ಬಗ್ಗೆ ಹಾರ್ದಿಕ್ ಹತಾಶರಾದುದು ಕಂಡು ಬಂತು. ಟಾಸ್ ಗೆದ್ದು ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ತಲಾ ನಾಲ್ಕು ಪಂದ್ಯಗಳನ್ನು ಸೋತಿರುವ ಉಭಯ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 116 ರನ್‍ಗಳಿಗೆ ಕೆಡವಿ 43 ಎಸೆತಗಳು ಇರುವಂತೆಯೇ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದ ಪಿಚ್‍ನಲ್ಲೇ ಈ ಪಂದ್ಯ ನಡೆದಿದ್ದು, ಅಂತಿಮವಾಗಿ ಮುಂಬೈ ಇಂಡಿಯನ್ಸ್ 4 ವಿಕೆಟ್‍ಗಳಿಂದ ಗೆಲುವು ಸಾಧಿಸಿತು.