ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದಂತೆ ಲವ್ಲಿನಾರನ್ನು ಹೇಮಂತ್ ತಡೆಯುತ್ತಿದ್ದಾರೆ: ಬಾಕ್ಸಿಂಗ್ ಫೆಡರೇಶನ್ ಅಧ್ಯಕ್ಷ ಅಜಯ್ ಸಿಂಗ್ ಆರೋಪ

PC | boxingfederation
ಗುವಾಹಟಿ: ಇತ್ತೀಚೆಗೆ ಅಮಾನತುಗೊಂಡಿರುವ ಬಿಎಫ್‌ಐ ಪ್ರಧಾನ ಕಾರ್ಯದರ್ಶಿ ಹೇಮಂತ್ ಕಲಿತಾ ಅವರು ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರನ್ನು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದಂತೆ ತಡೆಯುತ್ತಿದ್ದಾರೆ ಎಂದು ಭಾರತೀಯ ಬಾಕ್ಸಿಂಗ್ ಫೆಡರೇಶನ್(ಬಿಎಫ್‌ಐ)ಅಧ್ಯಕ್ಷ ಅಜಯ್ ಸಿಂಗ್ ಬುಧವಾರ ಆರೋಪಿಸಿದ್ದಾರೆ.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಯ್ ಸಿಂಗ್, ‘‘ಟೋಕಿಯೊ ಕ್ರೀಡಾಕೂಟದಲ್ಲಿ 69 ಕೆಜಿ ವಿಭಾಗದಲ್ಲಿ ಪದಕ ವಿಜೇತೆ ಲವ್ಲಿನಾ ಅವರು ಗುರುವಾರ ಗ್ರೇಟರ್ ನೊಯ್ಡಾದಲ್ಲಿ ಆರಂಭವಾಗಲಿರುವ ದೇಶೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಆದರೆ ಕಲಿತಾ ಅವರು ಹಿಂದೆ ಸರಿಯುವಂತೆ ಲವ್ಲಿನಾರನ್ನು ಕೇಳಿಕೊಂಡಿದ್ದಾರೆ’’ ಎಂದು ಹೇಳಿದ್ದಾರೆ.
ದಿಲ್ಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಸುಧೀರ್ ಕುಮಾರ್ ಜೈನ್ ನಡೆಸಿದ ವಿಚಾರಣೆಯಲ್ಲಿ ಹಣಕಾಸಿನ ದುರುಪಯೋಗದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿರುವ ಕಲಿತಾ, ಅಸ್ಸಾಂ ಬಾಕ್ಸಿಂಗ್ ಸಂಸ್ಥೆಯಲ್ಲಿ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದಾರೆ.
‘‘ಮಹಿಳಾ ನ್ಯಾಶನಲ್ಸ್‌ನಲ್ಲಿ ಭಾಗವಹಿಸದಂತೆ ಆಟಗಾರ್ತಿಯರಿಗೆ ಅಸ್ಸಾಂ ನಿರುತ್ಸಾಹಗೊಳಿಸುತ್ತಿದೆ. ಬೆಂಬಲದ ವೀಡಿಯೊವನ್ನು ಲವ್ಲಿನಾ ರೆಕಾರ್ಡ್ ಮಾಡಿದ್ದಾರೆ. ಆದರೆ, ಟೂರ್ನಿಯಲ್ಲಿ ಭಾಗವಹಿಸದಂತೆ ಲವ್ಲಿನಾಗೆ ಹೇಮಂತ್ ಕಲಿತಾ ಕೇಳಿಕೊಂಡಿದ್ದಾರೆ. ಅಸ್ಸಾಂ ಬಾಕ್ಸಿಂಗ್‌ಗೆ ಬಹಳಷ್ಟು ಋಣಿಯಾಗಿರುವುದರಿಂದ ಅವರು ತಮ್ಮ ಭಾಗವಹಿಸುವಿಕೆಯನ್ನು ಮರುಪರಿಶೀಲಿಸುತ್ತಿದ್ದಾರೆ’’ ಎಂದು ಸಿಂಗ್ ಹೇಳಿದರು.
ಈ ಆರೋಪಕ್ಕೆ ಹೇಮಂತ್ ಕಲಿತಾ ತಕ್ಷಣವೇ ಪ್ರತಿಕ್ರಿಯಿಸಿಲ್ಲ.
ಶೀಘ್ರದಲ್ಲೇ ನಡೆಯಲಿರುವ ಬಿಎಫ್‌ಐ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳ ಪೈಕಿ ಕಲಿತಾ ಕೂಡ ಒಬ್ಬರಾಗಿದ್ದರು. ಆದರೆ ಸಂಸ್ಥೆಯಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಎರಡು ಅವಧಿಗಳನ್ನು ಪೂರೈಸಿದ ನಂತರ ಕೂಲಿಂಗ್ ಆಫ್ ಅವಧಿಗೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು.