ಭಾರತದ ಒಲಿಂಪಿಕ್ ಆತಿಥ್ಯಕ್ಕೆ ಕಳವಳ ವ್ಯಕ್ತಪಡಿಸಿದ ಮಾನವ ಹಕ್ಕುಗಳ ನಿಗಾ ಸಂಸ್ಥೆ
ಮುಂಬೈ: 2036ರ ಬೇಸಿಗೆ ಒಲಿಂಪಿಕ್ ಗೆ ಆತಿಥ್ಯ ವಹಿಸಲು ಭಾರತವು ತನ್ನ ಹಕ್ಕು ಪ್ರತಿಪಾದನೆ ಮಾಡಿರುವ ಕುರಿತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯಾದ ಮಾನವ ಹಕ್ಕುಗಳ ನಿಗಾ ಸಂಸ್ಥೆಯು ತನ್ನ ಕಳವಳ ವ್ಯಕ್ತಪಡಿಸಿದೆ. ಈ ಹೇಳಿಕೆಯು ಅಕ್ಟೋಬರ್ 15ರಿಂದ 17ರವರೆಗೆ ಮುಂಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನಕ್ಕೂ ಮುನ್ನ ಹೊರ ಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತವು ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸುವ ಪ್ರತಿಪಾದನೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಈ ಪ್ರತಿಷ್ಠಿತ ಜಾಗತಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ಪ್ರಬಲ ಅಡ್ಡಿಯಾಗಿರುವ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಹಾಗೂ ಭಾರತೀಯ ಅಥ್ಲೀಟ್ ಗಳಿಗೆ ರಕ್ಷಣೆಯ ಕೊರತೆ ಇರುವುದು ಸೇರಿದಂತೆ ಭಾರತದಲ್ಲಿ ಕುಸಿಯುತ್ತಿರುವ ಮಾನವ ಹಕ್ಕುಗಳ ಸ್ಥಿತಿಯನ್ನು, ಮಾನವ ಹಕ್ಕುಗಳ ನಿಗಾ ಸಂಸ್ಥೆಯು ಎತ್ತಿ ತೋರಿಸಿದೆ.
ಈ ಸಂಘಟನೆಯು ಮೋದಿ ಸರ್ಕಾರವು ಅಳವಡಿಸಿಕೊಂಡಿರುವ ತಾರತಮ್ಯವಿರುವ ಕಾನೂನುಗಳು ಹಾಗೂ ನೀತಿಗಳು, ನಿರ್ದಿಷ್ಟವಾಗಿ ಮುಸ್ಲಿಮರನ್ನು ಒಳಗೊಂಡಂತೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧವಿರುವ ಕಾನೂನು ಮತ್ತು ನೀತಿಗಳ ಕುರಿತು ಕಳವಳ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತ ಗುಂಪುಗಳ ವಿರುದ್ಧದ ವ್ಯವಸ್ಥಿತ ತಾರತಮ್ಯ ಹಾಗೂ ವಿರೋಧಿ ಧ್ವನಿಗಳು, ಹೋರಾಟಗಾರರು, ಪ್ರತಿಭಟನಾಕಾರರು ಹಾಗೂ ಪತ್ರಕರ್ತರನ್ನು ಭೀತಿ ಹುಟ್ಟಿಸುವಿಕೆ, ಬೆದರಿಕೆ ಹಾಗೂ ರಾಜಕೀಯ ಪ್ರೇರಿತ ಅಪರಾಧ ಪ್ರಕರಣಗಳ ಮೂಲಕ ಹತ್ತಿಕ್ಕುತ್ತಿರುವುದರ ಕುರಿತು ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.
“ಮೋದಿ ಸರ್ಕಾರ ಒಲಿಂಪಿಕ್ ಆತಿಥ್ಯದ ಹಕ್ಕು ಪ್ರತಿಪಾದನೆ ಮಾಡುತ್ತಿರುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಮಾನವ ಹಕ್ಕುಗಳ ಸುಧಾರಣೆಗಳ ಜಾರಿ ಹಾಗೂ ಭಾರತೀಯ ಅಥ್ಲೀಟ್ ಗಳಿಗೆ ನ್ಯಾಯ ಒದಗಿಸುವಂತೆ ಒತ್ತಡ ಹೇರಲು ಅವಕಾಶವಿದೆ. ಒಂದು ವೇಳೆ ಅತ್ಯಂತ ದೊಡ್ಡ ಕ್ರೀಡಾಕೂಟದ ಆತಿಥ್ಯವನ್ನು ವಹಿಸುವ ಮೂಲಕ ಪ್ರತಿಷ್ಠೆ ಗಳಿಸಲು ಸರ್ಕಾರವು ಬಯಸುವುದಾದರೆ, ಅಥ್ಲೀಟ್ ಗಳ ನಿಂದನೆ ಹಾಗೂ ಪತ್ರಕರ್ತರನ್ನು ಗುರಿಯಾಗಿಸುವುದು ಸೇರಿದಂತೆ ಅವರ ದೇಶದಲ್ಲಿನ ಎಲ್ಲ ಭವಿಷ್ಯದ ಆತಿಥ್ಯವು ಸೂಕ್ತ ಮಾನವ ಹಕ್ಕುಗಳ ಕುರಿತ ಶ್ರದ್ಧೆ ಹಾಗೂ ನಿಂದನೆಯ ವಿರುದ್ಧ ಪರಿಹಾರ ಹಕ್ಕುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಖಾತ್ರಿಪಡಿಸಿಕೊಳ್ಳಬೇಕು” ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆಯು ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ಇದಕ್ಕೂ ಮುನ್ನ, ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಸದಸ್ಯರಾಗಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಅಥ್ಲೀಟ್ ಗಳನ್ನು ನಡೆಸಿಕೊಂಡಿದ್ದ ರೀತಿಯನ್ನು ಸ್ಪೋರ್ಟ್ಸ್ ಆ್ಯಂಡ್ ಅಲಯನ್ಸ್ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಖಂಡಿಸಿದ್ದವು. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದ ಮಹಿಳಾ ಅಥ್ಲೀಟ್ ಗಳಿಗೆ ನ್ಯಾಯ ಮತ್ತು ಸುರಕ್ಷತೆ ಒದಗಿಸಬೇಕು ಎಂದು ಪ್ರತಿಭಟನಾನಿರತ ಅಥ್ಲೀಟ್ ಗಳು ಆಗ್ರಹಿಸುತ್ತಿದ್ದರು. ಈ ಘಟನೆಯಿಂದ ಭಾರತದಲ್ಲಿನ ಅಥ್ಲೀಟ್ ಗಳ ಸುರಕ್ಷತೆಯ ಕುರಿತು ಕಳವಳ ವ್ಯಕ್ತವಾಗಿತ್ತು.