ಐಸಿಸಿ ರ‍್ಯಾಂಕಿಂಗ್ | ಜಸ್‌ಪ್ರಿತ್ ಬುಮ್ರಾ ಐತಿಹಾಸಿಕ ಸಾಧನೆ

Update: 2024-12-25 22:05 IST
Bumrah

ಜಸ್‌ಪ್ರಿತ್ ಬುಮ್ರಾ | PC : BCCI

  • whatsapp icon

ಹೊಸದಿಲ್ಲಿ : ಭಾರತದ ಪ್ರಮುಖ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

904 ರೇಟಿಂಗ್ ಪಾಯಿಂಟ್ಸ್ ತಲುಪಿರುವ ಬುಮ್ರಾ ಅವರು ಭಾರತೀಯ ಬೌಲರ್ ಗಳಿಸಿರುವ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಸರಿಗಟ್ಟಿದರು. ಈ ದಾಖಲೆಯು ಸ್ಪಿನ್ನರ್ ಆರ್.ಅಶ್ವಿನ್ ಹೆಸರಲ್ಲಿತ್ತು.

ಮುಂಬರುವ ಮೆಲ್ಬರ್ನ್ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ಅವರಿಗೆ ಅಶ್ವಿನ್ ದಾಖಲೆ ಮುರಿಯುವ ಅಪೂರ್ವ ಅವಕಾಶವಿದೆ ಎಂದು ಐಸಿಸಿ ತಿಳಿಸಿದೆ.

ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಟ್ರಾವಿಸ್ ಹೆಡ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ ನಲ್ಲಿ ಅಗ್ರ-3 ಸ್ಥಾನದ ಸಮೀಪದಲ್ಲಿದ್ದಾರೆ.

ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ 94 ರನ್ ನೀಡಿ 9 ವಿಕೆಟ್‌ಗಳನ್ನು ಪಡೆದಿದ್ದ ಬುಮ್ರಾ ಅಮೋಘ ಪ್ರದರ್ಶನ ನೀಡಿದ್ದರು. ಈ ಸಾಧನೆಯ ಮೂಲಕ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ ನಲ್ಲಿ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಈ ಪ್ರದರ್ಶನದ ಮೂಲಕ ಅವರು 14 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಜೋಶ್ ಹೇಝಲ್‌ವುಡ್ 3ನೇ ಸ್ಥಾನದಲ್ಲಿದ್ದಾರೆ.

ಪರ್ತ್ ಟೆಸ್ಟ್‌ನಲ್ಲಿ 152 ರನ್ ಗಳಿಸಿದ ನಂತರ ಅಡಿಲೇಡ್‌ನಲ್ಲಿ ಮತ್ತೊಂದು ಶತಕವನ್ನು ಸಿಡಿಸಿ 825 ಪಾಯಿಂಟ್ಸ್ ಗಳಿಸಿರುವ ಟ್ರಾವಿಸ್ ಹೆಡ್ 4ನೇ ಸ್ಥಾನಕ್ಕೇರಿದ್ದಾರೆ. 3ನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದ ಸ್ಟೀವ್ ಸ್ಮಿತ್ ಕೂಡ ಅಗ್ರ-10ರೊಳಗೆ ವಾಪಸಾಗಿದ್ದಾರೆ.

3ನೇ ಟೆಸ್ಟ್‌ನಲ್ಲಿ ಭಾರತದ ಮೊದಲ ಇನಿಂಗ್ಸ್‌ನಲ್ಲಿ ಅಬ್ಬರಿಸಿದ್ದ ಕೆ.ಎಲ್.ರಾಹುಲ್ ಅವರು 10 ಸ್ಥಾನ ಭಡ್ತಿ ಪಡೆದು 40ನೇ ಸ್ಥಾನ ತಲುಪಿದ್ದಾರೆ.

ಪ್ಯಾಟ್ ಕಮಿನ್ಸ್ ಟಾಪ್-10 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಥಾನ ಪಡೆದಿದ್ದಾರೆ. ಭಾರತ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್‌ಗಳು ಹಾಗೂ 42 ರನ್ ಗಳಿಸಿದ ನಂತರ ಈ ಸಾಧನೆ ಮಾಡಿದ್ದಾರೆ.

ಆಲ್‌ರೌಂಡ್ ಪ್ರದರ್ಶನ ನೀಡಿರುವ ಟ್ರಾವಿಸ್ ಹೆಡ್ ಆಲ್‌ರೌಂಡರ್ ರ‍್ಯಾಂಕಿಂಗ್‌ನಲ್ಲಿ 9 ಸ್ಥಾನ ಮೇಲಕ್ಕೇರಿ 29ನೇ ಸ್ಥಾನ ತಲುಪಿದ್ದಾರೆ.

*ಏಕದಿನ ರ‍್ಯಾಂಕಿಂಗ್: ಹೆನ್ರಿಕ್ ಕ್ಲಾಸೆನ್‌ಗೆ 5ನೇ ಸ್ಥಾನ

ಪಾಕಿಸ್ತಾನದ ವಿರುದ್ಧ ಸ್ಥಿರ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಪುರುಷರ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿದ್ದಾರೆ. ಇದೀಗ ಅವರು 743 ಅಂಕ ಗಳಿಸಿದ್ದಾರೆ.

ಇದೇ ಸರಣಿಯಲ್ಲಿ ದ.ಆಫ್ರಿಕಾದ ವಿರುದ್ಧ ಅವಳಿ ಶತಕಗಳನ್ನು ಗಳಿಸಿದ್ದ ಪಾಕ್ ಆಟಗಾರ ಸಯೀಮ್ ಅಯ್ಯೂಬ್ ತನ್ನ ರ‍್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. 603 ಪಾಯಿಂಟ್ಸ್‌ನೊಂದಿಗೆ 70ನೇ ಸ್ಥಾನದಿಂದ ಜಂಟಿ 23ನೇ ಸ್ಥಾನ ತಲುಪಿದ್ದಾರೆ.

ಝಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ 6 ವಿಕೆಟ್‌ಗಳನ್ನು ಪಡೆದಿರುವ ಅಫ್ಘಾನಿಸ್ತಾನದ ಅಝ್ಮತುಲ್ಲಾ ಉಮರ್ಝೈ 43 ಸ್ಥಾನ ಮೇಲಕ್ಕೇರಿ ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 58ನೇ ಸ್ಥಾನ ತಲುಪಿದ್ದಾರೆ.

ತನ್ನ ಆಲ್‌ರೌಂಡ್ ಸಾಮರ್ಥ್ಯದ ಮೂಲಕ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 5 ಸ್ಥಾನ ಭಡ್ತಿ ಪಡೆದು 3ನೇ ಸ್ಥಾನಕ್ಕೇರಿದ್ದಾರೆ.

ಟಿ-20 ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೆಹದಿ ಹಸನ್ ಹಾಗೂ ರೋಸ್ಟನ್ ಚೇಸ್ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. 13 ಸ್ಥಾನ ಭಡ್ತಿ ಪಡೆದಿರುವ ಹಸನ್ 10ನೇ ಸ್ಥಾನಕ್ಕೇರಿದರೆ, ಚೇಸ್ 11 ಸ್ಥಾನ ಭಡ್ತಿ ಪಡೆದು 13ನೇ ಸ್ಥಾನ ತಲುಪಿದ್ದಾರೆ. ಈ ಇಬ್ಬರು ವೆಸ್ಟ್‌ಇಂಡೀಸ್ ವಿರುದ್ಧ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News