ಐಸಿಸಿ ಟೆಸ್ಟ್ ರ‍್ಯಾಂಕಿಂಗ್ | ಅಗ್ರ ಸ್ಥಾನ ಉಳಿಸಿಕೊಂಡ ಜಸ್‌ಪ್ರಿತ್ ಬುಮ್ರಾ
ಹೊಸದಿಲ್ಲಿ: ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ತನ್ನ ಜೀವನಶ್ರೇಷ್ಠ ರೇಟಿಂಗ್ (908)ಕಾಯ್ದುಕೊಳ್ಳುವ ಮೂಲಕ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ತನ್ನ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಬೆನ್ನುನೋವಿನ ಕಾರಣದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಫೈನಲ್ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡದೇ ಇದ್ದರೂ ಬುಮ್ರಾ ಅವರ ಹಿಂದಿನ ಪ್ರಯತ್ನವು ಅವರನ್ನು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್‌ಗಿಂತ ಮುಂದಿರುವಂತೆ ಮಾಡಿದೆ. ಸರಣಿ ನಿರ್ಣಾಯಕ 5ನೇ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ಕಮಿನ್ಸ್ ಎರಡನೇ ಸ್ಥಾನದಲ್ಲಿದ್ದಾರೆ.
ಬುಮ್ರಾ ಅವರು ತನ್ನ ಸ್ಥಿರ ಪ್ರದರ್ಶನದ ಮೂಲಕ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಗರಿಷ್ಠ ರೇಟಿಂಗ್ ಪಾಯಿಂಟ್ಸ್ (908 )ಪಡೆದ ಭಾರತೀಯ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 33 ಎಸೆತಗಳಲ್ಲಿ 61 ರನ್ ಗಳಿಸಿದ್ದ ಭಾರತದ ರಿಷಭ್ ಪಂತ್ ಅವರು ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿ 9ನೇ ಸ್ಥಾನಕ್ಕೇರಿದರು.
ಇದೇ ವೇಳೆ ರವೀಂದ್ರ ಜಡೇಜ ಅವರು ವಿಶ್ವದ ಅಗ್ರ ರ‍್ಯಾಂಕಿನ ಆಲ್‌ರೌಂಡರ್ ಎಂಬ ಸ್ಥಾನ ಉಳಿಸಿಕೊಂಡಿದ್ದಾರೆ. ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯದ ಸ್ಕಾಟ್ ಬೋಲ್ಯಾಂಡ್‌ರೊಂದಿಗೆ 9ನೇ ಸ್ಥಾನ ಹಂಚಿಕೊಂಡಿದ್ದಾರೆ.
ಸಿಡ್ನಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯ ತಂಡ 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವಶಪಡಿಸಿಕೊಳ್ಳಲು ತನ್ನದೇ ಆದ ಕೊಡುಗೆ ನೀಡಿರುವ ಬೋಲ್ಯಾಂಡ್ ಅವರು ರ‍್ಯಾಂಕಿಂಗ್‌ನಲ್ಲಿ ಮಹತ್ವದ ಏರಿಕೆ ಕಂಡಿದ್ದಾರೆ. 29 ಸ್ಥಾನಗಳಲ್ಲಿ ಭಡ್ತಿ ಪಡೆದಿರುವ ಬೋಲ್ಯಾಂಡ್ ಅವರು ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನದ ವಿರುದ್ಧ ಆರು ವಿಕೆಟ್ ಗೊಂಚಲು ಪಡೆದಿರುವ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಆಲ್‌ರೌಂಡರ್ ರ‍್ಯಾಂಕಿಂಗ್ ನಲ್ಲಿ ರಬಾಡರ ಸಹ ಆಟಗಾರ ಮಾರ್ಕೊ ಜಾನ್ಸನ್ 2ನೇ ಸ್ಥಾನದಲ್ಲಿದ್ದಾರೆ. ಜಡೇಜಗೆ ಪೈಪೋಟಿ ನೀಡುತ್ತಿದ್ದಾರೆ. ಎರಡು ಅರ್ಧಶತಕಗಳನ್ನು ಗಳಿಸಿರುವ ಪಾಕಿಸ್ತಾನದ ಬಾಬರ್ ಆಝಮ್ ಟೆಸ್ಟ್ ಬ್ಯಾಟರ್‌ಗಳ ಪೈಕಿ 12ನೇ ಸ್ಥಾನಕ್ಕೇರಿದ್ದಾರೆ.
11 ವಿಕೆಟ್‌ಗಳ ಗೊಂಚಲು ಪಡೆದು ಝಿಂಬಾಬ್ವೆ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ರಶೀದ್ ಖಾನ್ ರ‍್ಯಾಂಕಿಂಗ್‌ನಲ್ಲಿ 54ನೇ ಸ್ಥಾನ ಪಡೆದಿದ್ದಾರೆ.