ಟೆಸ್ಟ್ ಕ್ರಿಕೆಟ್‌ಗೆ ಉತ್ತೇಜನ ನೀಡಲು ಐಸಿಸಿಯಿಂದ ನಿಧಿ?
ದುಬೈ : ಟೆಸ್ಟ್ ಕ್ರಿಕೆಟ್‌ಗೆ ಉತ್ತೇಜನ ನೀಡುವುದಕ್ಕಾಗಿ ನಿಧಿಯೊಂದನ್ನು ಸ್ಥಾಪಿಸುವ ಬಗ್ಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಪರಿಶೀಲಿಸುತ್ತಿದೆ. ಮೂರು ‘‘ದೊಡ್ಡ ತಂಡ’’ (ಭಾರತ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್) ಗಳನ್ನು ಹೊರತುಪಡಿಸಿ ಇತರ ದೇಶಗಳು ಫ್ರಾಂಚೈಸ್ ಲೀಗ್‌ಗಳಲ್ಲಿ ಉತ್ತಮ ರೀತಿಯಲ್ಲಿ ಸ್ಪರ್ಧಿಸಲು ನೆರವು ನೀಡುವುದು ಇದರ ಉದ್ದೇಶವಾಗಿದೆ.
ಈ ಕಲ್ಪನೆಯನ್ನು ಮೊದಲು ಹಂಚಿಕೊಂಡಿರುವುದು ಕ್ರಿಕೆಟ್ ಆಸ್ಟ್ರೇಲಿಯದ ಅಧ್ಯಕ್ಷ ಮಾರ್ಕ್ ಬೇರ್ಡ್. ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಪ್ರಸ್ತಾವಕ್ಕೆ ಬೆಂಬಲ ನೀಡಿವೆ.
ಆಟಗಾರರಿಗೆ ಕನಿಷ್ಠ ಪಂದ್ಯಶುಲ್ಕ, ಅಂದರೆ ಸುಮಾರು 10,000 ಡಾಲರ್ (ಸುಮಾರು 8.38 ಲಕ್ಷ ರೂಪಾಯಿ) ನೀಡುವ ಕೇಂದ್ರೀಯ ನಿಧಿಯೊಂದನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
ಕ್ರಿಸ್ಮಸ್ ವೇಳೆಗೆ ಪ್ರಸ್ತಾವವನ್ನು ಅಂತಿಮಗೊಳಿಸಿ ಮುಂದಿನ ವರ್ಷ ಜಾರಿಗೊಳಿಸುವ ಯೋಜನೆಯನ್ನು ಐಸಿಸಿ ಹೊಂದಿದೆ.
ಹೆಚ್ಚಿನ ಗಳಿಕೆಗಾಗಿ ಕಿರು ಮಾದರಿಯ ಕ್ರಿಕೆಟ್‌ಗೆ ಹೆಚ್ಚು ಹೆಚ್ಚು ಮೊರೆ ಹೋಗುತ್ತಿರುವ ಆಟಗಾರರನ್ನು ಟೆಸ್ಟ್ ಕ್ರಿಕೆಟ್‌ನತ್ತ ಆಕರ್ಷಿಸುವ ಉದ್ದೇಶದಿಂದ ಈ ಪ್ರಸ್ತಾವವನ್ನು ಮುಂದಿಡಲಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಕ್ರಿಕೆಟ್ ಮಂಡಳಿಗಳಿಗೆ ಟೆಸ್ಟ್ ಕ್ರಿಕೆಟ್‌ನ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ನೆರವು ನೀಡುವ ಯೋಜನೆಯನ್ನೂ ನಿಧಿ ಹೊಂದಿದೆ.