ನಾಳೆ ಭಾರತ-ಕೆನಡಾ ಸೆಣಸಾಟ

Update: 2024-06-14 17:01 GMT

PC : NDTV 

ಫ್ಲೋರಿಡಾ: ಲೌಡರ್ಹಿಲ್ ನಲ್ಲಿ ಶನಿವಾರ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾವು ತನ್ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಇತ್ತೀಚೆಗಿನ ಕಳಪೆ ಪ್ರದರ್ಶನದ ಕುರಿತಾಗಿ ಚಿಂತಿತವಾಗಿದೆ.

ಫ್ಲೋರಿಡಾದ ಕೆಲವು ಭಾಗದಲ್ಲಿ ಭಾರೀ ಮಳೆ ಸುರಿದು ಸಾಕಷ್ಟು ಹಾನಿಯಾಗಿದ್ದರೂ ಶನಿವಾರ ನಗರದಲ್ಲಿ ಆಕಾಶವು ಶುಭ್ರವಾಗಿರಲಿದೆ ಎಂದು ವಿಶ್ವಾಸ ಇಡಲಾಗಿದೆ.

ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತವು ಸೂಪರ್-8 ಹಂತಕ್ಕೆ ಈಗಾಗಲೇ ತೇರ್ಗಡೆಯಾಗಿದೆ.

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 150ರ ಸ್ಟ್ರೈಕ್ರೇಟ್ನಲ್ಲಿ 700ಕ್ಕೂ ಅಧಿಕ ರನ್ ಗಳಿಸಿರುವ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿ ಟಿ-20 ವಿಶ್ವಕಪ್ ಟೂರ್ನಿಯನ್ನು ಪ್ರವೇಶಿಸಿದ್ದರು.

ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ತನ್ನ ಉತ್ತಮ ಪ್ರದರ್ಶನ ನೀಡುತ್ತಾರೆಂದು ವಿಶ್ವಾಸ ಇಡಲಾಗಿದ್ದು, ಭಾರತಕ್ಕೆ 13 ವರ್ಷಗಳ ನಂತರ ಐಸಿಸಿ ವಿಶ್ವಕಪ್ ಗೆದ್ದುಕೊಡಲು ಕೊಹ್ಲಿಗೆ ಲಭಿಸಿರುವ ಕೊನೆಯ ಅವಕಾಶ ಇದಾಗಿದೆ.

ಅಮೆರಿಕ ವಿರುದ್ಧ ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ್ದ ಕೊಹ್ಲಿ ಮೂರು ಪಂದ್ಯಗಳ ನಂತರ ಕೇವಲ 5 ರನ್ ಗಳಿಸಿದ್ದಾರೆ.

ಟೂರ್ನಮೆಂಟ್ನ ಹೊಸ ತಂಡ ಕೆನಡಾ ವಿರುದ್ಧ ಪಂದ್ಯದಲ್ಲಾದರೂ ಕೊಹ್ಲಿ ಸಿಡಿದೇಳುತ್ತಾರೋ ಕಾದುನೋಡಬೇಕಾಗಿದೆ.

ಬ್ರೋವರ್ಡ್ ಕೌಂಟಿ ಕ್ರೀಡಾಂಗಣದ ಬಗ್ಗೆ ನ್ಯೂಯಾರ್ಕ್ ಪಿಚ್ನಲ್ಲಿದ್ದಂತೆ ವಿವಾದಗಳು ಸುತ್ತುವರಿದಿಲ್ಲ. ನ್ಯೂಯಾರ್ಕ್ ಪಿಚ್ನ ನಿಧಾನಗತಿಯ ಔಟ್ಫೀಲ್ಡ್, ಅನಿಯಮಿತ ಬೌನ್ಸ್ ಹೆಚ್ಚು ಚರ್ಚೆಗೆ ಒಳಗಾಗಿತ್ತು.

ಕೊಹ್ಲಿ ಅವರ ಕಳಪೆ ಫಾರ್ಮ್ ಭಾರತದ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ. ಆದರೆ ಅಗ್ರ ಸರದಿಯ ಬ್ಯಾಟರ್ಗಳ ಕಳಪೆ ಫಾರ್ಮ್ ಇತರ ಬ್ಯಾಟರ್ಗಳ ಮೇಲೆ ಒತ್ತಡವುಂಟು ಮಾಡುತ್ತದೆ.

ಸೂರ್ಯಕುಮಾರ್ ಯಾದವ್ ಹಾಗೂ ರಿಷಭ್ ಪಂತ್ ಶ್ಲಾಘನೀಯ ಪ್ರದರ್ಶನ ನೀಡಿದ್ದಾರೆ. ಪಂತ್ ಅವರು ಪಾಕಿಸ್ತಾನ ಹಾಗೂ ಐರ್ಲ್ಯಾಂಡ್ ವಿರುದ್ಧ ಕ್ರಮವಾಗಿ 36 ಹಾಗೂ 42 ರನ್ ಗಳಿಸಿದ್ದಾರೆ. ಇದು ಭಾರತದ ಗೆಲುವಿಗೆ ಸಾಕಾಗಿತ್ತು.

ಸೂರ್ಯಕುಮಾರ್ ಯಾದವ್ ಅಮೆರಿಕ ವಿರುದ್ಧ ಪಂದ್ಯದಲ್ಲಿ ಔಟಾಗದೆ 50 ರನ್ ಸಿಡಿಸಿ ಕಳಪೆ ಫಾರ್ಮ್ನಿಂದ ಹೊರಬಂದಿದ್ದಾರೆ.

ಆಲ್ರೌಂಡರ್ ಶಿವಂ ದುಬೆ ಅಮೆರಿಕಕ್ಕೆ ಬಂದಾಗಿನಿಂದ ರನ್ ಬರ ಎದುರಿಸುತ್ತಿದ್ದರು. ಆದರೆ ಸಹ ಆತಿಥ್ಯ ದೇಶವಾದ ಅಮೆರಿಕದ ವಿರುದ್ಧ 35 ಎಸೆತಗಳಲ್ಲಿ ಔಟಾಗದೆ 31 ರನ್ ಗಳಿಸಿದ್ದಾರೆ.

ಒಂದ ವೇಳೆ ಭಾರತವು ಯಶಸ್ವಿ ಜೈಸ್ವಾಲ್ರನ್ನು ಆರಂಭಿಕ ಆಟಗಾರನನ್ನಾಗಿ ಕಣಕ್ಕಿಳಿಸಿದರೆ ಕೊಹ್ಲಿ ಮತ್ತೊಮ್ಮೆ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ನ್ಯೂಯಾರ್ಕ್ನ ಡ್ರಾಪ್-ಇನ್ ಪಿಚ್ಗಳಲ್ಲಿ ಭಾರತದ ಬ್ಯಾಟಿಂಗ್ ಶಕ್ತಿಹೀನವಾಗಿದ್ದರೆ, ಇದೇ ಪಿಚ್ನಲ್ಲಿ ಭಾರತದ ಬೌಲರ್ಗಳು ಮಿಂಚುಹರಿಸಿದ್ದಾರೆ.

ಅರ್ಷದೀಪ್ ಸಿಂಗ್(7 ವಿಕೆಟ್ಗಳು), ಹಾರ್ದಿಕ್ ಪಾಂಡ್ಯ(7 ವಿಕೆಟ್ಗಳು) ಹಾಗೂ ಜಸ್ಪ್ರೀತ್ ಬುಮ್ರಾ(5 ವಿಕೆಟ್ಗಳು)ಎದುರಾಳಿ ಬ್ಯಾಟರ್ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪಾಂಡ್ಯ ಹಾಗೂ ಅರ್ಷದೀಪ್ ಅವರ ಪ್ರದರ್ಶನದ ಕುರಿತು ಟೀಮ್ ಮ್ಯಾನೇಜ್ಮೆಂಟ್ ಖುಷಿಯಾಗಿದೆ. ಈ ಇಬ್ಬರು ಐಪಿಎಲ್ನಲ್ಲಿ ನೀಡಿರುವ ಕಳಪೆ ಪ್ರದರ್ಶನಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದರು. ವಿಶ್ವಕಪ್ನಲ್ಲಿ ಎಲ್ಲವನ್ನೂ ಮರೆತು ಜಸ್ಪ್ರೀತ್ ಬುಮ್ರಾ ಜೊತೆಗೂಡಿ ಭಾರತವನ್ನು ಯಶಸ್ಸಿನತ್ತ ಮುನ್ನಡೆಸುತ್ತಿದ್ದಾರೆ.

ಮುಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜ ರನ್ ಸೋರಿಕೆ ಮಾಡಿದ್ದಾರೆ. ಸಿರಾಜ್ ವಿಕೆಟ್ ಪಡೆದಿದ್ದರೆ, ಜಡೇಜ ಒಂದೂ ವಿಕೆಟನ್ನು ಪಡೆದಿಲ್ಲ. ಯಜುವೇಂದ್ರ ಚಹಾಲ್ ಅಥವಾ ಕುಲದೀಪ್ ಯಾದವ್ ಅಥವಾ ಇಬ್ಬರೂ ಕೆನಡಾ ವಿರುದ್ಧ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಬಹುದು. ಇಂತಹ ಸನ್ನಿವೇಶದಲ್ಲಿ ಜಡೇಜ ಹಾಗೂ ಅಕ್ಷರ್ ಪಟೇಲ್ ವಿಶ್ರಾಂತಿ ಪಡೆಯಬಹುದು.

ಕೆನಡಾ ವಿರುದ್ಧ ಪಂದ್ಯವು ಕೆರಿಬಿಯನ್ ನಾಡಿನಲ್ಲಿ ನಡೆಯುವ ಸೂಪರ್-8 ಪಂದ್ಯಕ್ಕೆ ಬೌಲಿಂಗ್ ವಿಭಾಗಕ್ಕೆ ಪೂರ್ವ ತಯಾರಿ ನಡೆಸಲು ಅನುಕೂಲಕರವಾಗಿದೆ. ವಿಂಡೀಸ್ನ ಪಿಚ್ ಸ್ಪಿನ್ ಸ್ನೇಹಿಯಾಗಿದೆ.

*ಪಂದ್ಯ ಆರಂಭದ ಸಮಯ: ರಾತ್ರಿ 8:00

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News