23 ವರ್ಷಗಳ ಬಳಿಕ ಶ್ರೀಲಂಕಾ ವಿರುದ್ಧ ಸೇಡು ತೀರಿಸಿಕೊಂಡ ಭಾರತ!
ಕೊಲಂಬೋ : ಕ್ರೀಡೆಯಲ್ಲಿ ಪ್ರತೀಕಾರವೇ ಅತ್ಯುತ್ತಮವಾದ ಉತ್ತರ. ರವಿವಾರ ಕೊಲಂಬೊದಲ್ಲಿ ನಡೆದ ಏಷ್ಯಾ ಕಪ್ 2023 ಫೈನಲ್‌ನಲ್ಲಿ ಶ್ರೀಲಂಕಾವನ್ನು 50 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತೀಯ ಕ್ರಿಕೆಟ್ ತಂಡ ಅದಕ್ಕೆ ನಿದರ್ಶನ. ಇದು ಏಕದಿನ ಟೂರ್ನಿಯ ಫೈನಲ್‌ನಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತ. 23 ವರ್ಷಗಳ ಕಾಲ ಭಾರತದ ಹೆಸರಿನಲ್ಲಿದ್ದ ಮರೆಯಲಾಗದ ದಾಖಲೆಯನ್ನು ಶ್ರೀಲಂಕಾ ಮುರಿದಿದೆ. 2000 ರಲ್ಲಿ ಶಾರ್ಜಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 54 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಭಾರತದ ವಿರುದ್ಧ ತಂಡ ದಾಖಲಿಸಿದ ಕನಿಷ್ಠ ಏಕದಿನ ಮೊತ್ತ. 2014 ರಲ್ಲಿ ಮಿರ್‌ಪುರದಲ್ಲಿ ಬಾಂಗ್ಲಾದೇಶದ 58 ಭಾರತದ ವಿರುದ್ಧದ ಅತ್ಯಂತ ಕಡಿಮೆ ಮೊತ್ತವಾಗಿತ್ತು.
ಏಕದಿನ ಕ್ರಿಕೆಟ್ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಹಮ್ಮದ್ ಸಿರಾಜ್ ಅವರು ಶ್ರೀಲಂಕಾದ ಕಳಪೆ ಮೊತ್ತದ ರೂವಾರಿ. “ಇದೆಲ್ಲವೂ ಕನಸಿನಂತೆ ಭಾಸವಾಗುತ್ತಿದೆ. ಕಳೆದ ಬಾರಿ ಶ್ರೀಲಂಕಾ ವಿರುದ್ಧ ನಾನು ತಿರುವನಂತಪುರಂನಲ್ಲಿ ಇದೇ ರೀತಿ ಮಾಡಿದ್ದೆ. ಬೇಗನೇ 4 ವಿಕೆಟ್ ಪಡೆದಿದ್ದೆ. ಆದರೆ ಬಳಿಕ 5 ಅಥವಾ ಅದಕ್ಕಿಂತ ಹೆಚ್ಚು ಪಡೆಯಲು ನನ್ನಿಂದ ಸಾಧ್ಯವಾಗಿರಲಿಲ್ಲ. ನಮ್ಮ ಹಣೆಬರಹದಲ್ಲಿರುವುದು ಮಾತ್ರ ಸಿಗುತ್ತದೆ ಎಂದು ಇವತ್ತು ತಿಳಿಯಿತು. ಇವತ್ತು ಹೆಚ್ಚಿನದ್ದೇನನ್ನೂ ನಾನು ಪ್ರಯತ್ನಿಸಿಲ್ಲ. ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ನಾನು ಸ್ವಿಂಗ್ ಮಾತ್ರ ನಿರೀಕ್ಷಿಸುತ್ತಿದ್ದೆ. ಇವತ್ತು ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿತ್ತು. ನಾನು ಔಟ್ ಸ್ವಿಂಗರ್ನಲ್ಲಿ ಹೆಚ್ಚು ವಿಕೆಟ್ ಪಡೆದೆ” ಎಂದು ಸಿರಾಜ್ ತಮ್ಮ ಬೌಲಿಂಗ್ ಸಾಧನೆಯನ್ನು ಹಂಚಿಕೊಂಡರು.
ಮೊಹಮ್ಮದ್ ಸಿರಾಜ್ ಅವರು 21ಕ್ಕೆ 6 ವಿಕೆಟ್ ಪಡೆದು ಶ್ರೀಲಂಕಾವನ್ನು 50 ರನ್‌ಗಳಿಗೆ ಕಟ್ಟಿಹಾಕಿದರು. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಭಾರೀ ಮೋಡ ಕವಿದ ವಾತಾವರಣದ ಹೊರತಾಗಿಯೂ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಆದರೆ ಚಂಡ ಮಾರುತದಂತೆ ಶ್ರೀಲಂಕಾ ತಂಡಕ್ಕೆ ಅಪ್ಪಳಿಸಿದ ಮುಹಮ್ಮದ್ ಸಿರಾಜ್ ಶ್ರೀಲಂಕಾ ತಂಡಕ್ಕೆ ಪೆವಿಲಿಯನ್ ಗೆ ಬೇಗನೇ ದಾರಿ ತೋರಿಸಿಕೊಟ್ಟರು. ಆ ಮೂಲಕ ಶ್ರೀಲಂಕಾ ತಂಡ ಭಾರತದ ವಿರುದ್ಧ ಕಡಿಮೆ ಮೊತ್ತ ದಾಖಲಿಸುವಂತೆ ಮಾಡಿದರು. ಜೊತೆಗೆ ಏಕದಿನ ಇತಿಹಾಸದಲ್ಲಿ ಒಂದು ಓವರ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ನಾಲ್ಕನೇ ಬೌಲರ್ ಎನಿಸಿಕೊಂಡರು. ಏಕದಿನ ಪಂದ್ಯಗಳಲ್ಲಿ ವೇಗವಾಗಿ ಐದು ವಿಕೆಟ್‌ಗಳನ್ನು ಪಡೆದ ಶ್ರೀಲಂಕಾದ ಮಾಜಿ ವೇಗಿ ಚಮಿಂಡಾ ವಾಸ್ ಸಾಧನೆ ಸರಿಗಟ್ಟಿದರು.
ಜಸ್ಪ್ರೀತ್ ಬುಮ್ರಾ ಅವರು ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಕುಸಾಲ್ ಪೆರೆರಾ ಅವರನ್ನು ಹೊರಹಾಕಿದ ನಂತರ ಸಿರಾಜ್ ಬೌಲಿಂಗ್ ಗೆ ಬಂದರು. ಪಿಚ್ ತೇವಾಂಶ ಕೊಲಂಬೋ ಹವಾಮಾನಕ್ಕೆ ತಕ್ಕುದಾಗಿರಲಿಲ್ಲ. ಲಂಡನ್ ಪಿಚ್ ನಂತೆ ಕಂಡು ಬಂದಿತ್ತು. ಸಿರಾಜ್ ಕೂಡಲೇ ಅದನ್ನು ಅರಿತುಕೊಂಡಿದ್ದು ಅವರ ಬೌಲಿಂಗ್ ಲಯವೇ ಹೇಳುತ್ತಿತ್ತು.
ಸಿರಾಜ್ 4ನೇ ಓವರ್‌ನಲ್ಲಿ ಅಂದರೆ 3.1, 3.3, 3.4 ಮತ್ತು 3.6 ಎಸೆತಗಳಲ್ಲಿ ಎದುರಾಳಿ ತಂಡದ ಪತನವನ್ನು ಸಂಭ್ರಮಿಸುವ ನೃತ್ಯ ಮಾಡಿದರು. ಪಾತುಮ್ ನಿಶಾಂಕ, ಸದೀರ ಸಮರ ವಿಕ್ರಮ, ಚರಿತ್ ಅಸಲಂಕ ಮತ್ತು ಧನಂಜಯ ಡಿ ಸಿಲ್ವ ಎಂಬುವವರೇ ಸಿರಾಜ್ ಗೆ ಆ ಓವರ್ ನಲ್ಲಿ ಬಲಿಯಾದ ಬ್ಯಾಟರ್ ಗಳು.