ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಭಾರತ ಬಯಸುತ್ತಿದೆ : ಎಸ್.ಜೈಶಂಕರ್‌

Update: 2024-05-12 16:55 GMT

 ಎಸ್.ಜೈಶಂಕರ್‌ | PC : PTI 

ಹೊಸದಿಲ್ಲಿ : ಪೂರ್ವ ಲಡಾಖ್‌ನಲ್ಲಿಯ ಮಿಲಿಟರಿ ಬಿಕ್ಕಟ್ಟು ಐದನೇ ವರ್ಷಕ್ಕೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು, ಚೀನಾದೊಂದಿಗೆ ಬಾಕಿಯುಳಿದಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತವು ಆಶಿಸುತ್ತಿದೆ ಎಂದು ಹೇಳಿದ್ದಾರೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸಹಜ ಸ್ಥಿತಿಗೆ ಮರಳುವುದು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಅವಲಂಬಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್‌, ಬಾಕಿಯಿರುವ ಸಮಸ್ಯೆಗಳು ಮುಖ್ಯವಾಗಿ ‘ಗಸ್ತು ತಿರುಗುವ ಹಕ್ಕುಗಳು ಮತ್ತು ಗಸ್ತು ಸಾಮರ್ಥ್ಯಗಳಿಗೆ ’ ಸಂಬಂಧಿಸಿವೆ ಎಂದರು.

ಕಳೆದ ತಿಂಗಳು ನ್ಯೂಸ್‌ವೀಕ್ ನಿಯತಕಾಲಿಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಹಿನ್ನೆಲೆಯಲ್ಲಿ ಎಳೆಯುತ್ತಲೇ ಇರುವ ವಿವಾದಕ್ಕೆ ಪರಿಹಾರವನ್ನು ಯಾವಾಗ ನಿರೀಕ್ಷಿಸಬಹುದು ಎಂಬ ನಿರ್ದಿಷ್ಟ ಪ್ರಶ್ನೆಗೆ ಜೈಶಂಕರ್‌, ಅವರು ಈ ವಿಷಯದಲ್ಲಿ ವಿಶಾಲ ದೃಷ್ಟಿಕೋನವನ್ನಷ್ಟೇ ಒದಗಿಸಿದ್ದಾರೆ ಮತ್ತು ಅದು ಅತ್ಯಂತ ಸಮಂಜಸವಾಗಿದೆ. ಎಷ್ಟೆಂದರೂ ಪ್ರತಿದೇಶವೂ ತನ್ನ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಬಯಸುತ್ತದೆ ಎಂದು ಉತ್ತರಿಸಿದರು.

ಆದರೆ ಇಂದು ಚೀನಾದೊಂದಿಗೆ ನಮ್ಮ ಸಂಬಂಧಗಳು ಸಾಮಾನ್ಯವಾಗಿಲ್ಲ,ಏಕೆಂದರೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕದಡಿದೆ. ಹೀಗಾಗಿ ಪ್ರಸಕ್ತ ಸ್ಥಿತಿಯು ತನ್ನ ಸ್ವಂತ ಹಿತಾಸಕ್ತಿಗೆ ಪೂರಕವಾಗಿಲ್ಲ ಎನ್ನುವುದನ್ನು ಚೀನಾ ಅರ್ಥಮಾಡಿಕೊಳ್ಳಬೇಕು ಎಂಬ ಆಶಯವನ್ನು ಪ್ರಧಾನಿ ವ್ಯಕ್ತಪಡಿಸಿದ್ದರು ಎಂದು ಜೈಶಂಕರ್‌ ಹೇಳಿದರು.

ನ್ಯೂಸ್‌ವೀಕ್ ಜೊತೆ ಮಾತನಾಡಿದ ಮೋದಿ, ಗಡಿ ಬಿಕ್ಕಟ್ಟನ್ನು ತುರ್ತಾಗಿ ಬಗೆಹರಿಸುವ ಅಗತ್ಯವಿದೆ ಮತ್ತು ಭಾರತ ಹಾಗೂ ಚೀನಾ ನಡುವೆ ಸ್ಥಿರ ಮತ್ತು ಶಾಂತಿಯುತ ಸಂಬಂಧಗಳು ಉಭಯ ದೇಶಗಳಿಗೆ ಮಾತ್ರವಲ್ಲ, ಇಡೀ ಪ್ರದೇಶ ಮತ್ತು ಜಗತ್ತಿಗೂ ಮುಖ್ಯವಾಗಿದೆ ಎಂದು ಹೇಳಿದ್ದರು.

ರಾಜತಾಂತ್ರಿಕತೆಯು ಸಹನೆಯಿಂದ ನಿರ್ವಹಿಸಬೇಕಾದ ಕೆಲಸವಾಗಿದೆ ಮತ್ತು ಚೀನಾದೊಂದಿಗೆ ಸಮಸ್ಯೆಗಳ ಕುರಿತು ಚರ್ಚೆಗಳನ್ನು ಭಾರತವು ಮುಂದುವರಿಸುತ್ತದೆ ಎಂದು ಸಂದರ್ಶನದಲ್ಲಿ ಹೇಳಿದ ಜೈಶಂಕರ್‌, ದ್ವಿಪಕ್ಷೀಯ ಸಂಬಂಧಗಳು ಸಾಮಾನ್ಯಸ್ಥಿತಿಗೆ ಮರಳಬೇಕಿದ್ದರೆ ನಮ್ಮ ನಡುವಿನ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News