ನಾಳೆಯಿಂದ ಆಸ್ಟ್ರೇಲಿಯ ವಿರುದ್ಧದ ಭಾರತೀಯ ಮಹಿಳಾ ಹಾಕಿ ತಂಡದ ಸರಣಿ ಆರಂಭ

Update: 2025-04-25 21:55 IST
ನಾಳೆಯಿಂದ ಆಸ್ಟ್ರೇಲಿಯ ವಿರುದ್ಧದ ಭಾರತೀಯ ಮಹಿಳಾ ಹಾಕಿ ತಂಡದ ಸರಣಿ ಆರಂಭ

PC : uniindia.com

  • whatsapp icon

ಹೊಸದಿಲ್ಲಿ: ಭಾರತೀಯ ಮಹಿಳಾ ಹಾಕಿ ತಂಡವು ಎಪ್ರಿಲ್ 26 ರಿಂದ ಮೇ 4ರವರೆಗೆ ಆಸ್ಟ್ರೇಲಿಯದಲ್ಲಿ ಐದು ಪಂದ್ಯಗಳ ಸರಣಿಯೊಂದನ್ನು ಆಡಲಿದೆ.

ಭಾರತವು ಪರ್ತ್ ಹಾಕಿ ಸ್ಟೇಡಿಯಮ್‌ ನಲ್ಲಿ ಮೊದಲು ಎಪ್ರಿಲ್ 26 ಮತ್ತು 27ರಂದು ಆಸ್ಟ್ರೇಲಿಯ ‘ಎ’ ತಂಡವನ್ನು ಎದುರಿಸಲಿದೆ. ಬಳಿಕ ಮೇ 1ರಿಂದ ಹಿರಿಯರ ತಂಡದ ವಿರುದ್ಧ ಆಡಲಿದೆ.

ತವರಿನಲ್ಲಿ ನಡೆದಿರುವ ಎಫ್‌ಐಎಚ್ ಪ್ರೋ ಲೀಗ್ ಪಂದ್ಯಗಳಲ್ಲಿ ಭಾರತವು ಮಿಶ್ರ ಫಲಿತಾಂಶವನ್ನು ಪಡೆದಿದೆ. ಅದು ಎಂಟು ಪಂದ್ಯಗಳನ್ನು ಆಡಿ ಎರಡು ನೇರ ವಿಜಯಗಳನ್ನು ಗಳಿಸಿದರೆ, ಒಂದರಲ್ಲಿ ಶೂಟೌಟ್ ಮೂಲಕ ಗೆಲುವು ಸಂಪಾದಿಸಿದೆ. ಅದು ತನ್ನ ಹಿಂದಿನ ಪಂದ್ಯದಲ್ಲಿ ವಿಶ್ವ ನಂಬರ್ ವನ್ ನೆದರ್‌ಲ್ಯಾಂಡ್ಸನ್ನು ಶೂಟೌಟ್‌ನಲ್ಲಿ ಸೋಲಿಸಿ ತನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಂಡಿದೆ. ನಿಯಮಿತ ಅವಧಿಯಲ್ಲಿ ಪಂದ್ಯವು 2-2ರ ಡ್ರಾದಲ್ಲಿ ಕೊನೆಗೊಂಡಾಗ ಫಲಿತಾಂಶ ನಿರ್ಧರಿಸಲು ಶೂಟೌಟ್ ಅನಿವಾರ್ಯವಾಯಿತು.

ಆಸ್ಟ್ರೇಲಿಯ ಪ್ರವಾಸಕ್ಕೆ 26 ಸದಸ್ಯರ ತಂಡವನ್ನು ಕೋಚ್ ಹರೇಂದ್ರ ಸಿಂಗ್ ಘೋಷಿಸಿದ್ದಾರೆ. ಸಲೀಮಾ ಟೇಟೆ ಮತ್ತು ನವನೀತ್ ಕೌರ್ ಕ್ರಮವಾಗಿ ನಾಯಕಿ ಮತ್ತು ಉಪನಾಯಕಿ ಆಗಿದ್ದಾರೆ.

ಯುವ ಡ್ರ್ಯಾಗ್‌ಫ್ಲಿಕರ್ ದೀಪಿಕಾ ಅತ್ಯುತ್ತಮ ಫಾರ್ಮ್‌ ನಲ್ಲಿದ್ದಾರೆ. ಫೆಬ್ರವರಿಯಲ್ಲಿ ನಡೆದ ಭಾರತದದ ಎಫ್‌ಐಎಚ್ ಹಾಕಿ ಪ್ರೊ ಲೀಗ್ ಪಂದ್ಯಗಳಲ್ಲಿ ಅವರು ಮೂರು ಮಹತ್ವದ ಗೋಲುಗಳನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯವು ಯಾವತ್ತೂ ಭಾರತದ ಪ್ರಬಲ ಎದುರಾಳಿಯಾಗಿದೆ. ಈವರೆಗೆ ಉಭಯ ತಂಡಗಳು ಆಡಿರುವ 16 ಪಂದ್ಯಗಳ ಪೈಕಿ 10 ಪಂದ್ಯಗಳನ್ನು ಅದು ಗೆದ್ದಿದೆ ಮತ್ತು ಮೂರು ಪಂದ್ಯಗಳು ಡ್ರಾ ಆಗಿವೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಭಾರತವು ಆಸ್ಟ್ರೇಲಿಯ ವಿರುದ್ಧ ಉತ್ತಮ ಪ್ರದರ್ಶನವನ್ನು ನೀಡಿದೆ. 2023-24ರ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ, ಉಭಯ ತಂಡಗಳ ನಡುವಿನ ಇತ್ತೀಚಿನ ಪಂದ್ಯವನ್ನು ಭಾರತ 1-0 ಅಂತರದಿಂದ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News