ನಾಳೆ ಭಾರತಕ್ಕೆ ನೇಪಾಳ ಎದುರಾಳಿ, ಸೂಪರ್-4ರ ಮೇಲೆ ಕಣ್ಣು
ಹೊಸದಿಲ್ಲಿ : ಪಾಕಿಸ್ತಾನ ವಿರುದ್ಧ ಶನಿವಾರ ನಡೆಯಬೇಕಿದ್ದ ಏಶ್ಯಕಪ್ ಪಂದ್ಯವು ಮಳೆಗಾಹುತಿಯಾದ ಕಾರಣ ನಿರಾಸೆಗೊಂಡಿರುವ ಭಾರತ ಸೋಮವಾರ ಕ್ರಿಕೆಟ್ ಶಿಶು ನೇಪಾಳ ತಂಡವನ್ನು ಎದುರಿಸಲಿದ್ದು, ಏಶ್ಯಕಪ್ ಟೂರ್ನಿಯ ಸೂಪರ್-4 ಹಂತದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ಚಿತ್ತ ಹರಿಸಿದೆ.
ಎ ಗುಂಪಿನಲ್ಲಿ ಒಟ್ಟು 3 ಅಂಕ ಗಳಿಸಿರುವ ಪಾಕಿಸ್ತಾನ ತಂಡ ಈಗಾಗಲೇ ಸೂಪರ್-4 ಹಂತಕ್ಕೇರಿದೆ. ಶನಿವಾರ ಪಾಕ್ ವಿರುದ್ಧದ ಮಳೆಯಿಂದ ಪಂದ್ಯವು ರದ್ದಾದ ಕಾರಣ ಭಾರತವು ಒಂದು ಅಂಕವನ್ನು ಪಡೆದಿದೆ.
ನೇಪಾಳದ ವಿರುದ್ಧದ ಮತ್ತೊಂದು ಪಂದ್ಯಕ್ಕೆ ಮಳೆ ಅಡ್ಡಿಯಾದರೂ ಕೂಡ 2 ಅಂಕದೊಂದಿಗೆ ಭಾರತ ಸೂಪರ್-4 ಹಂತಕ್ಕೇರಲಿದೆ. ಆದರೆ ರೋಹಿತ್ ಶರ್ಮಾ ಬಳಗ ಅರ್ಹವಾಗಿಯೇ ಮುಂದಿನ ಸುತ್ತಿಗೇರಲು ಆದ್ಯತೆ ನೀಡುತ್ತಿದೆ.
ಭಾರತವು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೆಲವು ಸಕಾರಾತ್ಮಕ ಅಂಶವನ್ನು ಪಡೆದಿದೆ. ಟೂರ್ನಮೆಂಟ್ನ ನಿರ್ಣಾಯಕ ಹಂತ ತಲುಪಿದಾಗ ಮತ್ತಷ್ಟು ಎಚ್ಚರಿಕೆಯಿಂದ ಆಡಲು ಬಯಸಿದೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತವು 15ನೇ ಓವರ್ನಲ್ಲಿ 66 ರನ್ಗೆ 4 ವಿಕೆಟ್ ಕಳೆದುಕೊಂಡು ಅಗ್ರ ಸರದಿಯ ಕುಸಿತಕ್ಕೆ ಒಳಗಾಗಿತ್ತು. ಪಾಕಿಸ್ತಾನದ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ಹಾರಿಸ್ ರವೂಫ್ ಪ್ರಬಲ ದಾಳಿಯನ್ನು ಸಂಘಟಿಸಿದ್ದರು. ಮೊದಲ ಬಾರಿ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದ ಇಶಾನ್ ಕಿಶನ್ ಅವರು ಹಾರ್ದಿಕ್ ಪಾಂಡ್ಯ ಜೊತೆಗೂಡಿ 5ನೇ ವಿಕೆಟ್ಗೆ 138 ರನ್ ಜೊತೆಯಾಟ ನಡೆಸಿ ಭಾರತವು 266 ರನ್ ಗಳಿಸಲು ನೆರವಾಗಿದ್ದರು.
ನೇಪಾಳ ತಂಡವು ಪಾಕಿಸ್ತಾನದಷ್ಟು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿಲ್ಲ. ಹೀಗಾಗಿ ಕಿಶನ್ ಮತ್ತಷ್ಟು ರನ್ ಗಳಿಸುವ ವಿಶ್ವಾಸದಲ್ಲಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿದ್ದಾರೆ. ಹೀಗಾಗಿ ಇವೆಲ್ಲರೂ ಇನ್ನಷ್ಟೇ ಏಕದಿನ ಕ್ರಿಕೆಟ್ ಮೂಡ್ಗೆ ಮರಳಬೇಕಾಗಿದೆ.
ನೇಪಾಳ ತಂಡ ಪಾಕಿಸ್ತಾನ ವಿರುದ್ಧ ಆಡಿರುವ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ 238 ರನ್ನಿಂದ ಹೀನಾಯವಾಗಿ ಸೋತಿದೆ. ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಹಾಗೂ ನಾಯಕ ರೋಹಿತ್ ಪೌದೆಲ್ ಮೇಲೆ ನೇಪಾಳ ಹೆಚ್ಚಿನ ವಿಶ್ವಾಸ ಇರಿಸಿಕೊಂಡಿದೆ.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 3:00
ಮತ್ತೊಂದು ಪಂದ್ಯವೂ ಮಳೆಗಾಹುತಿಯಾಗುವ ಭೀತಿ
ಪಾಕಿಸ್ತಾನ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಭಾರತವು ನೇಪಾಳ ವಿರುದ್ಧ ಸೋಮವಾರ ನಿಗದಿಯಾಗಿರುವ ಮತ್ತೊಂದು ಪಂದ್ಯದಲ್ಲೂ ಮಳೆಯ ಭೀತಿ ಎದುರಿಸುತ್ತಿದೆ. ಸೋಮವಾರದ ಪಂದ್ಯಕ್ಕೆ ಪ್ರತಿಕೂಲ ಹವಾಮಾನದ ಮುನ್ಸೂಚನೆ ಲಭಿಸಿದೆ.
ಭಾರತವು ನೇಪಾಳ ವಿರುದ್ಧ ಪಂದ್ಯಕ್ಕೆ ತಯಾರಿ ನಡೆಸುತ್ತಿರುವಾಗಲೇ ನಿನ್ನೆಯಿಂದ ಪಲ್ಲೆಕೆಲೆಯಲ್ಲಿ ಸುರಿಯುತ್ತಿರುವ ಮಳೆಯು ಈ ನಿರ್ಣಾಯಕ ಪಂದ್ಯದ ಮೇಲೆ ಕಳವಳ ಮೂಡಿಸಿದೆ.
ಪಲ್ಲೆಕೆಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.80ರಷ್ಟಿದೆ ಎಂದು ಗೂಗಲ್ ವೆದರ್ ತಿಳಿಸಿದೆ