ಭಾರತ ನೂತನ ಟಿ20 ಚಾಂಪಿಯನ್ | ಶ್ಲಾಘಿಸಿದ ಧೋನಿ, ತೆಂಡುಲ್ಕರ್, ಗವಾಸ್ಕರ್

Update: 2024-06-30 15:44 GMT

Photo : x

ಹೊಸದಿಲ್ಲಿ : ಲೆಜೆಂಡ್ ಗಳಾದ ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಸಹಿತ ಭಾರತದ ಕ್ರಿಕೆಟ್ ಸಮುದಾಯವು ಟಿ20 ವಿಶ್ವಕಪ್‌ ನಲ್ಲಿ ತಂಡದ ಗೆಲುವನ್ನು ಸಂಭ್ರಮಿಸಿದ್ದು, ಇದು ಹೊಳೆಯುವ ಕಣ್ಣುಗಳ ಮಕ್ಕಳು ತಮ್ಮ ಕನಸುಗಳಿಗೆ ಒಂದು ಹೆಜ್ಜೆ ಹತ್ತಿರವಾಗಲು ಇದು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.

ಬಾರ್ಬಡೋಸ್ನಲ್ಲಿ ಶನಿವಾರ ನಡೆದ ರೋಚಕ ಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ನಿಂದ ಸೋಲಿಸಿದ ನಂತರ 17 ವರ್ಷಗಳ ಬಳಿಕ ಮೊದಲ ಬಾರಿ ವಿಶ್ವಕಪ್ ಜಯಿಸಿರುವ ರೋಹಿತ್ ಪಡೆಯನ್ನು ಮಾಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು ಬಾಯ್ತುಂಬ ಶ್ಲಾಘಿಸಿದ್ದಾರೆ.

ವಿಶ್ವಕಪ್ಪನ್ನು ಮರಳಿ ಮನೆಗೆ ತಂದಿದ್ದಕ್ಕಾಗಿ ಸ್ವದೇಶ ಹಾಗೂ ವಿದೇಶದಲ್ಲಿರುವ ಎಲ್ಲ ಭಾರತೀಯರ ಪರವಾಗಿ ನಿಮಗೆ ದೊಡ್ಡ ಧನ್ಯವಾದಗಳು. ಅಮೂಲ್ಯವಾದ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಕ್ಕೆ ಅಭಿನಂದನೆಗಳು ಎಂದು ಮುಂದಿನ ತಿಂಗಳ ಆರಂಭದಲ್ಲಿ 43ನೇ ವಯಸ್ಸಿಗೆ ಕಾಲಿಡಲಿರುವ ಧೋನಿ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.

ಭಾರತದ ಸಾಧನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸಿದ ತೆಂಡುಲ್ಕರ್, 1983 ಹಾಗೂ 2011ರಲ್ಲಿ 50 ಓವರ್ ಮಾದರಿಯಲ್ಲಿ ಎರಡು ವಿಶ್ವಕಪ್, 2007ರ ಮೊತ್ತ ಮೊದಲ ಟಿ20 ವಿಶ್ವಕಪ್ ನಂತರ ದೇಶವು ಇದೀಗ ನಾಲ್ಕನೇ ಸ್ಟಾರ್ ಪಡೆದಿದೆ. ಟೀಮ್ ಇಂಡಿಯಾ ಜರ್ಸಿಗೆ ಸೇರ್ಪಡೆಯಾಗುವ ಪ್ರತಿಯೊಂದು ಸ್ಟಾರ್ಗಳು ನಮ್ಮ ಹೊಳೆಯುವ ಕಂಗಳ ಮಕ್ಕಳಿಗೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಸ್ಫೂರ್ತಿಯಾಗಲಿದೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.

2007ರ ಏಕದಿನ ವಿಶ್ವಕಪ್‌ ನಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದ ಭಾರತ ತಂಡದ ಭಾಗವಾಗಿದ್ದ ತೆಂಡುಲ್ಕರ್, ವೆಸ್ಟ್ಇಂಡೀಸ್ ನಲ್ಲಿ ಭಾರತೀಯ ಕ್ರಿಕೆಟ್ ಒಂದು ವೃತ್ತವನ್ನು ಪೂರ್ಣಗೊಳಿಸಿದೆ. 2007ರ ಏಕದಿನ ವಿಶ್ವಕಪ್‌ ನಲ್ಲಿ ಹಿನ್ನಡೆ ಕಂಡಿದ್ದ ನಾವು 2024ರ ಟಿ20 ವಿಶ್ವಕಪ್ಪನ್ನು ಜಯಿಸಿ ಕ್ರಿಕೆಟ್ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. 2011ರ ವಿಶ್ವಕಪ್ ನಿಂದ ವಂಚಿತರಾಗಿದ್ದ ನನ್ನ ಸ್ನೇಹಿತ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್ ಗೆಲ್ಲಲು ಅಪಾರ ಕೊಡುಗೆ ನೀಡಿದ್ದು, ಅವರ ಕುರಿತು ನನಗೆ ಸಂತೋಷವಾಗುತ್ತಿದೆ. ರೋಹಿತ್ ನಾಯಕತ್ವ ಅತ್ಯುತ್ತಮವಾಗಿತ್ತು. ಸರಣಿಶ್ರೇಷ್ಠ ಜಸ್ಪ್ರಿತ್ ಬುಮ್ರಾ ಹಾಗೂ ಪಂದ್ಯಶ್ರೇಷ್ಠ ವಿರಾಟ್ ಕೊಹ್ಲಿ ಈ ಪ್ರಶಸ್ತಿಗೆ ಅರ್ಹರಿದ್ದಾರೆ ಎಂದರು.

ದೀರ್ಘ ಸಮಯದ ನಂತರ ವಿಶ್ವಕಪ್ ಜಯಿಸಿದ್ದು ದೊಡ್ಡ ಸಾಧನೆ. ಭಾರತವು ಈ ಹಿಂದೆ ಸೆಮಿ ಫೈನಲ್ಸ್ ಹಾಗೂ ಫೈನಲ್ ಗೆ ತಲುಪುತ್ತಿತ್ತು. 90 ಗಳಿಸುತ್ತಿತ್ತು, ಶತಕ ಗಳಿಸುತ್ತಿರಲಿಲ್ಲ ಎಂದು ನಾನು ಹೇಳುತ್ತಿದ್ದೆ. ಇದೀಗ ಶತಕ ಗಳಿಸಿದ್ದಾರೆ.ಇದೊಂದು ಅದ್ಭುತ ಶತಕವಾಗಿದೆ ಎಂದು ಭಾರತದ ಮಾಜಿ ನಾಯಕ ಗವಾಸ್ಕರ್ ಪಿಟಿಐಗೆ ತಿಳಿಸಿದರು.

ಟೀಮ್ ಇಂಡಿಯಾದ ಅದ್ಭುತ ಸಾಧನೆಯನ್ನು ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಸೌರವ್ ಗಂಗುಲಿ, ಗೌತಮ್ ಗಂಭೀರ್ ಸೇರಿದಂತೆ ಪ್ರತಿಯೊಬ್ಬರು ಶ್ಲಾಘಿಸಿದ್ದಾರೆ.

ಟಿ20ಚಾಂಪಿಯನ್ ಆಗಿರುವ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಇದು ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಉಳಿದಿರುವ ಅತ್ಯುತ್ತಮ ತಂಡವಾಗಿದೆ ಎಂದು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಹಾಲಿ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಎಕ್ಸ್ನಲ್ಲಿ ಬರೆದಿದ್ದಾರೆ.

ನಾವೀಗ ಚಾಂಪಿಯನ್ಗಳು ಎಂದು ಪ್ರಮುಖ ಸ್ಪಿನ್ನರ್ ಹಾಗೂ 2011ರ ವಿಶ್ವಕಪ್ ವಿಜೇತ ಆಟಗಾರ ಆರ್.ಅಶ್ವಿನ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಭಾರತೀಯ ತಂಡಕ್ಕೆ ಅಭಿನಂದನೆಗಳು, ಇದು ಅದ್ಭುತ ಗೆಲುವು ಎಂದು ಭಾರತದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಬರೆದಿದ್ದಾರೆ.

ಇದು ನನ್ನ ಭಾರತ, ನಾವು ಚಾಂಪಿಯನ್ ಗಳು, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಎಕ್ಸ್ನಲ್ಲಿ ಬರೆದಿದ್ದಾರೆ.

ಅಮೆರಿಕದಲ್ಲಿ ಟಿ20 ವಿಶ್ವಕಪ್‌ ನ ರಾಯಭಾರಿಯಾಗಿದ್ದ ಯುವರಾಜ್ ಸಿಂಗ್ ತಂಡದ ಎಲ್ಲ ಪ್ರಮುಖ ಆಟಗಾರರನ್ನು ಕೊಂಡಾಡಿದ್ದಾರೆ.

ರೋಹಿತ್ ಶರ್ಮಾ ಹಾಗೂ ಅವರ ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು.. ಇದು ಎಂತಹ ಅದ್ಭುತ ಪಂದ್ಯ..11(13)ವರ್ಷಗಳ ನಂತರ ಗೆದ್ದಿರುವ ವಿಶ್ವಕಪ್ ಇದಾಗಿರಬಹುದು. ಆದರೆ ಇನ್ನೂ ಹೆಚ್ಚಿನದ್ದನ್ನು ಗೆಲ್ಲುವ ಪ್ರತಿಭೆಗಳು ದೇಶದಲ್ಲಿದ್ದಾರೆ. ಬುಮ್ರಾ ಅವರದ್ದು ನಿಜವಾಗಿಯೂ ಮ್ಯಾಜಿಕ್. ವಿರಾಟ್, ಅಕ್ಷರ್, ರಾಹುಲ್ ದ್ರಾವಿಡ್ ಹಾಗೂ ಸಹಾಯಕ ಸಿಬ್ಬಂದಿ ಸಹಿತ ಪ್ರತಿಯೊಬ್ಬರೂ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.. ಇದೊಂದು ಹೆಮ್ಮೆಯ ಕ್ಷಣವಾಗಿದೆ ಎಂದು ಗಂಗುಲಿ ಹೇಳಿದ್ದಾರೆ.






Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News