ಪಾಕ್ ಕ್ರೀಡಾಪಟುವಿಗೆ ಆಹ್ವಾನ ನೀಡಿದ್ದಕ್ಕೆ ಟೀಕೆ: ಪಹಲ್ಗಾಮ್ ದಾಳಿಗೆ ಮೊದಲೇ ನದೀಂಗೂ ಆಹ್ವಾನ ನೀಡಲಾಗಿತ್ತು ಎಂದ ನೀರಜ್ ಚೋಪ್ರಾ

Update: 2025-04-25 12:49 IST
ಪಾಕ್ ಕ್ರೀಡಾಪಟುವಿಗೆ ಆಹ್ವಾನ ನೀಡಿದ್ದಕ್ಕೆ ಟೀಕೆ: ಪಹಲ್ಗಾಮ್ ದಾಳಿಗೆ ಮೊದಲೇ ನದೀಂಗೂ ಆಹ್ವಾನ ನೀಡಲಾಗಿತ್ತು ಎಂದ ನೀರಜ್ ಚೋಪ್ರಾ
  • whatsapp icon

ಹೊಸದಿಲ್ಲಿ: ನೀರಜ್ ಚೋಪ್ರಾ ಕ್ಲಾಸಿಕ್ ಕ್ರೀಡಾಕೂಟಕ್ಕೆ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಶದ್ ನದೀಂ ಅವರಿಗೆ ಆಹ್ವಾನ ನೀಡಿದ ಕಾರಣಕ್ಕೆ ತಮ್ಮ ವಿರುದ್ಧ ದಾಳಿ ನಡೆಸುತ್ತಿರುವವರಿಗೆ ಶುಕ್ರವಾರ ತಿರುಗೇಟು ನೀಡಿರುವ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಪಹಲ್ಗಾಮ್ ದಾಳಿ ನಡೆಯುವುದಕ್ಕೂ ಮುನ್ನವೇ ಬೇರೆಲ್ಲ ಕ್ರೀಡಾಪಟುಗಳಿಗೆ ನೀಡಿದ್ದ ಆಹ್ವಾನದಂತೆಯೆ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅಶ್ರಫ್ ನದೀಂಗೂ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಅಶ್ರಫ್ ನದೀಂ ಅವರಿಗೆ ನೀಡಿದ ಆಹ್ವಾನಕ್ಕಾಗಿ ನಾನು ಮತ್ತು ನನ್ನ ಕುಟುಂಬ ನಿಂದನೆಗಳನ್ನು ಎದುರಿಸುತ್ತಿರುವುದು ಹಾಗೂ ದೇಶದ ಬಗೆಗಿನ ನಮ್ಮ ಬದ್ಧತೆಯು ಪ್ರಶ್ನಿಸುತ್ತಿರುವುದರಿಂದ ನನಗೆ ನೋವಾಗಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ.

ಮೇ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಕ್ರೀಡಾಕೂಟಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತಮ್ಮನ್ನು ಮಣಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅಶ್ರಫ್ ನದೀಂ ಅವರನ್ನು ನೀರಜ್ ಚೋಪ್ರಾ ಆಹ್ವಾನಿಸಿದ್ದರು.

ಆದರೆ, ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೀರಜ್ ಚೋಪ್ರಾ ನೀಡಿದ್ದ ಆಹ್ವಾನವನ್ನು ಅಶ್ರಫ್ ನದೀಂ ತಿರಸ್ಕರಿಸಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನೀರಜ್ ಚೋಪ್ರಾ, "ನೀರಜ್ ಚೋಪ್ರಾ ಕ್ಲಾಸಿಕ್‌ನಲ್ಲಿ ಸ್ಪರ್ಧಿಸುವಂತೆ ನಾನು ಅಶ್ರಫ್ ನದೀಂ ಅವರಿಗೆ ನೀಡಿದ್ದ ಆಹ್ವಾನದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಪೈಕಿ ಬಹುತೇಕ ಮಾತುಕತೆಗಳು ದ್ವೇಷ ಮತ್ತು ನಿಂದನೆಯನ್ನು ಒಳಗೊಂಡಿವೆ. ಇದರಿಂದ ಅವರು ನನ್ನ ಕುಟುಂಬವನ್ನೂ ಕೈಬಿಟ್ಟಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.

ʼನಾನು ಸಾಮಾನ್ಯವಾಗಿ ಕೆಲವೇ ಮಾತುಗಳನ್ನಾಡುತ್ತೇನೆ ಎಂಬುದರ ಅರ್ಥ, ನನಗೆ ತಪ್ಪು ಎಂದು ಅನಿಸಿದ್ದರ ವಿರುದ್ಧವೂ ಮಾತನಾಡುವುದಿಲ್ಲವೆಂದಲ್ಲ. ಅದರಲ್ಲೂ ನನ್ನ ದೇಶದ ಬಗೆಗಿನ ನನ್ನ ಪ್ರೀತಿ ಹಾಗೂ ನನ್ನ ಕುಟುಂಬದ ಗೌರವ ಮತ್ತು ಘನತೆಯ ಬಗ್ಗೆ ಪ್ರಶ್ನಿಸಿದಾಗ ಮಾತನಾಡುತ್ತೇನೆʼ ಎಂದು ನೀರಜ್ ಚೋಪ್ರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಮಂಗಳವಾರಕ್ಕೂ ಒಂದು ದಿನ ಮೊದಲು, ಸೋಮವಾರದಂದು ನೀರಜ್ ಚೋಪ್ರಾ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅಶ್ರಫ್ ನದೀಂ ಅವರನ್ನು ಈ ಅಹ್ವಾನಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News