ಐಪಿಎಲ್-2024: ಜಾನಿ ಬೈರ್ ಸ್ಟೋವ್ ಪಂಜಾಬ್ ಕಿಂಗ್ಸ್ ಗೆ ಲಭ್ಯ

Update: 2024-03-13 16:02 GMT

ಜಾನಿ ಬೈರ್‌ ಸ್ಟೋವ್‌ 

ಹೊಸದಿಲ್ಲಿ: ಭಾರತ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಮುಗಿಸಿ ಇತ್ತೀಚೆಗಷ್ಟೇ ಸ್ವದೇಶಕ್ಕೆ ವಾಪಸಾಗಿರುವ ಹೊರತಾಗಿಯೂ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜಾನಿ ಬೈರ್‌ ಸ್ಟೋವ್ ಮಾರ್ಚ್ 22ರಿಂದ ಆರಂಭವಾಗಲಿರುವ ಇಡೀ ಐಪಿಎಲ್ ಟೂರ್ನಿಗೆ ಲಭ್ಯವಿರಲಿದ್ದಾರೆ.

ಐಪಿಎಲ್ ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸುವ ಕುರಿತಂತೆ ಧರ್ಮಶಾಲಾ ಟೆಸ್ಟ್ ಪಂದ್ಯದ ವೇಳೆ ಬಿಸಿಸಿಐ ಅಧಿಕಾರಿಗಳು ಹಾಗೂ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಅಧಿಕಾರಿಗಳ ನಡುವೆ ಚರ್ಚೆ ನಡೆದಿತ್ತು.

ಇಸಿಬಿಯ ಒತ್ತಡ ನಿಭಾಯಿಸುವ ತಂತ್ರದ ಭಾಗವಾಗಿ ಟೆಸ್ಟ್ ತಂಡದ ಪ್ರಮುಖ ಆಟಗಾರರಾದ ನಾಯಕ ಬೆನ್ ಸ್ಟೋಕ್ಸ್, ಜೋ ರೂಟ್ ಹಾಗೂ ಮಾರ್ಕ್ ವುಡ್ ರವಿವಾರ ಕೊನೆಗೊಂಡ ಐದನೇ ಟೆಸ್ಟ್ ಪಂದ್ಯದ ನಂತರ ಅತ್ಯಂತ ಶ್ರೀಮಂತ ಟಿ-20 ಲೀಗ್ ಐಪಿಎಲ್ ನಿಂದ ಹೊರಗುಳಿದಿದ್ದಾರೆ.

ಬೈರ್ಸ್ಟೋವ್ ಮಾರ್ಚ್ 18 ಇಲ್ಲವೇ 19ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ. ಮಾರ್ಚ್ 23ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ತಂಡ ಆಡಲಿರುವ ಮೊದಲ ಪಂದ್ಯದಲ್ಲಿ ಲಭ್ಯವಿರುವ ಸಾಧ್ಯತೆಯಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ಬೈರ್ಸ್ಟೋವ್ ಧರ್ಮಶಾಲಾದಲ್ಲಿ ತನ್ನ 100ನೇ ಟೆಸ್ಟ್ ಪಂದ್ಯವನ್ನು ಆಡಿದ್ದರು. ಭಾರತದಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಇದೀಗ ಐಪಿಎಲ್ ನಲ್ಲಿ ರನ್ ಗಳಿಸುವತ್ತ ಚಿತ್ತ ಹರಿಸಿದ್ದಾರೆ.

2024ರ ಆವೃತ್ತಿಯ ಐಪಿಎಲ್ ಗಿಂತ ಮೊದಲು ಪಂಜಾಬ್ ಕಿಂಗ್ಸ್ ನ ಕ್ರಿಕೆಟ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಂಜಯ್ ಬಂಗಾರ್ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಬಂಗಾರ್ ಈ ಹಿಂದೆ ಆರ್ಸಿಬಿ ಹಾಗೂ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದರು.

ಪಂಜಾಬ್ ಕಿಂಗ್ಸ್ 2014ರ ಆವೃತ್ತಿಯ ಐಪಿಎಲ್ ನಲ್ಲಿ ಕೊನೆಯ ಬಾರಿ ಫೈನಲ್ ನಲ್ಲಿ ಕಾಣಿಸಿಕೊಂಡಿತ್ತು. ಆ ನಂತರ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿದೆ.

ಐಪಿಎಲ್ ಟೂರ್ನಿಯ ಪೂರ್ಣ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಾಗಿದೆ. ಪಂಜಾಬ್ ಕಳೆದ ಋತುವಿನಂತೆಯೇ ಈ ಬಾರಿ ಧರ್ಮಶಾಲಾದಲ್ಲಿ ತನ್ನ ಕೊನೆಯ ಎರಡು ತವರು ಪಂದ್ಯಗಳನ್ನು ಆಡುವ ನಿರೀಕ್ಷೆ ಇದೆ.

ಇತರ ಐದು ಪಂದ್ಯಗಳು ಮೊಹಾಲಿಯ ಮುಲ್ಲನ್ಪುರದಲ್ಲಿ ನಿರ್ಮಾಣಗೊಂಡಿರುವ ನೂತನ ಸ್ಟೇಡಿಯಮ್ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News