IPL 2024| ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆ 3 ವಿಕೆಟ್ ಜಯ

Update: 2024-04-13 18:15 GMT

Photo : PTI

ಮುಲ್ಲನ್‍ಪುರ (ಪಂಜಾಬ್): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಶನಿವಾರ ರಾಜಸ್ಥಾನ ರಾಯಲ್ಸ್ (ಆರ್ ಆರ್) ತಂಡವು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು 3 ವಿಕೆಟ್‍ಗಳ ಅಂತರದಿಂದ ರೋಮಾಂಚಕಾರಿಯಾಗಿ ಸೋಲಿಸಿತು.

ಮುಲ್ಲನ್‍ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರ್‍ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿ, ಗೆಲ್ಲಲು 148 ರನ್‍ಗಳ ಸರಳ ಗುರಿಯನ್ನು ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲಿ ಪರದಾಡಿತಾದರೂ, ಅಂತಿಮವಾಗಿ, ಒಂದು ಎಸೆತ ಬಾಕಿಯಿರುವಂತೆಯೇ 7 ವಿಕೆಟ್‍ಗಳ ನಷ್ಟಕ್ಕೆ 152 ರನ್‍ಗಳನ್ನು ಗಳಿಸಿ ವಿಜಯವನ್ನು ಘೋಷಿಸಿತು.

ಶಿಮ್ರಾನ್ ಹೆಟ್ಮಯರ್ (10 ಎಸೆತಗಳಲ್ಲಿ 27 ರನ್) ವಿಜಯದ ರನ್‍ಗಳನ್ನು ಬಾರಿಸಿ ಅಜೇಯವಾಗಿ ಉಳಿದರು.

ಯಶಸ್ವಿ ಜೈಸ್ವಾಲ್ (28 ಎಸೆತಗಳಲ್ಲಿ 39) ಮತ್ತು ತನುಷ್ ಕೋಟ್ಯಾನ್ (31 ಎಸೆತಗಳಳ್ಲಿ 24) ಉತ್ತಮ ಆರಂಭ ನೀಡಿದರು. ರಿಯಾನ್ ಪರಾಗ್ 18 ಎಸೆತಗಳಲ್ಲಿ 23 ರನ್‍ಗಳನ್ನು ಗಳಿಸಿದರು.

ಕಗಿಸೊ ರಬಡ (18-2) ಮತ್ತು ಸ್ಯಾಮ್ ಕರನ್ (25-2) ತಲಾ ಎರಡು ವಿಕೆಟ್‍ಗಳನ್ನು ಉರುಳಿಸಿದರು.

ಇದಕ್ಕೂ ಮೊದಲು, ರಾಜಸ್ಥಾನ ರಾಯಲ್ಸ್ ಬೌಲರ್‍ಗಳು ಪಂಜಾಬ್ ಕಿಂಗ್ಸ್ ಬ್ಯಾಟರ್‍ಗಳ ಮೇಲೆ ನಿರಂತರವಾಗಿ ಒತ್ತಡವನ್ನು ಹೇರಿದ ಪರಿಣಾಮವಾಗಿ ಅದಕ್ಕೆ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಕೇವಲ 147 ರನ್‍ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಟಾಸ್ ಸೋತ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ನಡೆಸಿತು.

ಗಾಯದಿಂದ ಬಳಲುತ್ತಿರುವ ನಿಯಮಿತ ನಾಯಕ ಶಿಖರ್ ಧವನ್ ಶನಿವಾರದ ಪಂದ್ಯದಿಂದ ಹೊರಗುಳಿದಿದ್ದಾರೆ. ತಂಡದ ನಾಯಕತ್ವವನ್ನು ಸ್ಯಾಮ್ ಕರನ್ ವಹಿಸಿದರು.

ಪಂಜಾಬ್ ಕಿಂಗ್ಸ್ ಬ್ಯಾಟರ್ ಗಳು ಯಾವುದೇ ಹಂತದಲ್ಲಿ ತಂಡದ ರನ್ ಗಳಿಕೆಗೆ ವೇಗವನ್ನು ತಂದುಕೊಡುವಲ್ಲಿ ವಿಫಲವಾದರು.

ಅಥರ್ವ ಟೈಡೆ (12 ಎಸೆತಗಳಲ್ಲಿ 15 ರನ್) ಮತ್ತು ಜಾನಿ ಬೇರ್‍ಸ್ಟೋ (19 ಎಸೆತಗಳಲ್ಲಿ 15) ತಂಡದ ಇನಿಂಗ್ಸ್‍ಗೆ ನೀರಸ ಆರಂಭ ಒದಗಿಸಿದರು.

ಬಳಿಕ ಬಂದ ಪ್ರಭ್‍ಸಿಮ್ರಾನ್ ಸಿಂಗ್ (14 ಎಸೆತಗಳಲ್ಲಿ 10 ರನ್) ಕ್ಷಿಪ್ರ ನಿರ್ಗಮನ ಕಂಡರು. ನಾಯಕ ಸ್ಯಾಮ್ ಕರನ್ 10 ಎಸೆತಗಳಲ್ಲಿ 6 ರನ್ ಗಳಿಸಿ ನಿರ್ಗಮಿಸಿದರು.

ಕೆಳ ಕ್ರಮಾಂಕದ ಬ್ಯಾಟರ್‍ಗಳು ತಂಡದ ಮೊತ್ತವನ್ನು 150ರ ಗಡಿ ಸಮೀಪ ಒಯ್ಯಲು ನೆರವು ನೀಡಿದರು. ಆಶುತೋಷ್ ಶರ್ಮ (16 ಎಸೆತಗಳಲ್ಲಿ 31 ರನ್), ಜಿತೇಶ್ ಶರ್ಮ (24 ಎಸೆತಗಳಲ್ಲಿ 29 ರನ್) ಮತ್ತು ಲಿಯಮ್ ಲಿವಿಂಗ್‍ಸ್ಟೋನ್ (14 ಎಸೆತಗಳಲ್ಲಿ 21 ರನ್) ಎದುರಾಳಿ ಬೌಲರ್‍ಗಳಿಗೆ ಕೊಂಚ್ ಪ್ರತಿರೋಧ ಒಡ್ಡಿದರು.

ವಿಕೆಟ್‍ಗಳು ನಿಯಮಿತ ಅಂತರದಲ್ಲಿ ಬೀಳುತ್ತಲೇ ಇದ್ದವು. ಹಿಂದಿನ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಶಶಾಂಕ್ ಸಿಂಗ್ ಕೂಡ 9 ಎಸೆತಗಳಲ್ಲಿ 9 ರನ್ ಗಳಿಸಿ ಬೇಗನೇ ಪೆವಿಲಿಯನ್‍ಗೆ ವಾಪಸಾದರು.

ರಾಜಸ್ಥಾನ ರಾಯಲ್ಸ್ ಪರವಾಗಿ ಕೇಶವ ಮಹಾರಾಜ್ ಮತ್ತು ಆವೇಶ್ ಖಾನ್ ತಲಾ ಎರಡು ವಿಕೆಟ್‍ಗಳನ್ನು ಉರುಳಿಸಿದರು. ಟ್ರೆಂಟ್ ಬೋಲ್ಟ್, ಕುಲದೀಪ್ ಸೇನ್ ಮತ್ತು ಯುಝ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News