ಐಪಿಎಲ್ | ಮಾತನಾಡಿಸಲು ಬಂದ ಲಕ್ನೋ ಫ್ರಾಂಚೈಸಿಯ ಮಾಲಕರನ್ನು ಕಡೆಗಣಿಸಿದ ಕೆ.ಎಲ್.ರಾಹುಲ್!

ಕೆ.ಎಲ್.ರಾಹುಲ್ | PC : X
ಲಕ್ನೊ: ಮಂಗಳವಾರ ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲಕ್ನೊ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೇವಲ 42 ಬಾಲ್ ಗಳಲ್ಲಿ ಅಜೇಯ 57 ರನ್ ಬಾರಿಸುವ ಮೂಲಕ, ದಿಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆ ಮೂಲಕ ಕಳೆದ ಬಾರಿಯ ಐಪಿಎಲ್ ಋತುವಿನಲ್ಲಿ ನಾಕೌಟ್ ಹಂತ ತಲುಪಲು ವಿಫಲವಾಗಿದ್ದಕ್ಕೆ ಲಕ್ನೊ ಸೂಪರ್ ಜೈಂಟ್ಸ್ ತಂಡದ ಮಾಲಕ ಸಂಜೀವ್ ಗೋಯೆಂಕಾರಿಂದ ನಿಂದನೆಗೊಳಗಾಗಿದ್ದ ಅವರು, ಈ ಪಂದ್ಯದಲ್ಲಿ ಅದೇ ತಂಡದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದರು.
ಪಂದ್ಯ ಮುಕ್ತಾಯಗೊಂಡ ನಂತರ, ಮೈದಾನದಿಂದ ಹೊರ ಬರುತ್ತಿದ್ದ ಕೆ.ಎಲ್.ರಾಹುಲ್, ಲಕ್ನೊ ಸೂಪರ್ ಜೈಂಟ್ಸ್ ತಂಡದ ಮಾಲಕ ಸಂಜೀವ್ ಗೋಯೆಂಕಾರ ಕೈಕುಲುಕಿದರು. ಆದರೆ, ಅವರೊಂದಿಗೆ ಮಾತನಾಡಲು ಸಂಜೀವ್ ಗೋಯೆಂಕಾ ಹಾಗೂ ಅವರ ಪುತ್ರ ಶಾಶ್ವತ್ ಗೋಯೆಂಕಾ ಪ್ರಯತ್ನಿಸಿದರಾದರೂ, ಅವರಿಗೆ ಅಂತಹ ಯಾವುದೇ ಅವಕಾಶವನ್ನು ಒದಗಿಸದೆ ಕೆ.ಎಲ್.ರಾಹುಲ್ ಡ್ರೆಸ್ಸಿಂಗ್ ಕೊಠಡಿಯತ್ತ ತೆರಳಿದರು. ಆ ಮೂಲಕ ಕಳೆದ ಐಪಿಎಲ್ ಋತುವಿನಲ್ಲಿ ತಮ್ಮನ್ನು ಅವಮಾನಿಸಿದ್ದ ಲಕ್ನೊ ಸೂಪರ್ ಜೈಂಟ್ಸ್ ತಂಡದ ಮಾಲಕ ಸಂಜೀವ್ ಗೋಯೆಂಕಾರಿಗೆ ತಕ್ಕ ಪಾಠ ಕಲಿಸಿದರು.
ಇದಕ್ಕೂ ಮುನ್ನ, ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಲಕ್ನೊ ಸೂಪರ್ ಜೈಂಟ್ಸ್ ತಂಡ, 6 ವಿಕೆಟ್ ಕಳೆದುಕೊಂಡು 159 ರನ್ ಗಳ ಸಾಧಾರಣ ಮೊತ್ತವನ್ನು ಪೇರಿಸಿತು. ಈ ಗುರಿಯನ್ನು ಲೀಲಾಜಾಲವಾಗಿ ಬೆನ್ನತ್ತಿದ ದಿಲ್ಲಿ ಕ್ಯಾಪಿಟಲ್ಸ್ ತಂಡ, ಆರಂಭಿಕ ಬ್ಯಾಟರ್ ಅಭಿಷೇಕ್ ಪೋರೆಲ್ (51), ಕೆ.ಎಲ್.ರಾಹುಲ್ (ಅಜೇಯ 57) ಹಾಗೂ ನಾಯಕ ಅಕ್ಷರ್ ಪಟೇಲ್ (ಅಜೇಯ 34) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ, ಕೇವಲ 2 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ದಾಟಿತು.