ಮುಗಿಯದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಸಮಸ್ಯೆ; ಕ್ಷೀಣಗೊಂಡ ಟಿ20 ವಿಶ್ವಕಪ್ ಅವಕಾಶ : ವರದಿ

Update: 2024-02-29 14:18 GMT

ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ |Photo: NDTV 

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2023-24ನೇ ಋತುವಿಗೆ (ಅಕ್ಟೋಬರ್ 1, 2023ರಿಂದ ಸೆಪ್ಟೆಂಬರ್ 30, 2024ರವರೆಗೆ) ಬಿಡುಗಡೆಗೊಳಿಸಿರುವ ಭಾರತ ತಂಡದ ವಾರ್ಷಿಕ ಗುತ್ತಿಗೆ ಪಟ್ಟಿ(ಹಿರಿಯ ಪುರುಷರು)ಯಿಂದ ಬುಧವಾರ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದೆ. ಈ ಇಬ್ಬರೂ ಇತ್ತೀಚೆಗೆ ಭಾರತ ತಂಡದಲ್ಲಿ ನಿಯಮಿತವಾಗಿ ಸ್ಥಾನ ಪಡೆಯುತ್ತಿದ್ದರೂ, ಅವರಿಬ್ಬರನ್ನೂ ಗುತ್ತಿಗೆ ಪಟ್ಟಿಯಿಂದ ವಜಾಗೊಳಿಸಿರುವುದು ದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸುವ ಆಟಗಾರರಿಗೆ ಬಿಸಿಸಿಐ ರವಾನಿಸಿರುವ ಕಠಿಣ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇಶಾನ್ ಕಿಶನ್ ಭಾರತ ತಂಡವು ಕಳೆದ ಬಾರಿ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ಪ್ರವಾಸದ ಭಾಗವಾಗಿದ್ದರೆ, ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಪ್ರಥಮ ಎರಡು ಪಂದ್ಯಗಳಲ್ಲಿ ತಂಡದ ಸದಸ್ಯರಾಗಿದ್ದರು.

ಸದ್ಯ, ಈ ಇಬ್ಬರು ಆಟಗಾರರನ್ನು ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿರುವುದರಿಂದ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯುವ ಅವಕಾಶ ಈ ಇಬ್ಬರ ಪಾಲಿಗೆ ಕ್ಷೀಣವಾಗಿದೆ ಎಂದು The Indian Express ಪತ್ರಿಕೆ ವರದಿ ಮಾಡಿದೆ.

ಐಪಿಎಲ್ ತಂಡಗಳಲ್ಲಿ ಈ ಇಬ್ಬರೂ ಆಟಗಾರರು ಕ್ರಮವಾಗಿ ಹಿರಿಯ ಆಟಗಾರರಾಗಿದ್ದಾರೆ. ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದ್ದು, ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಲಿದ್ದಾರೆ. ಆದರೆ, ಅವರಿಬ್ಬರೂ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡರೆ ಮಾತ್ರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. “ಇಶಾನ್ ಗೆ ತಾವು ಬಯಸಿದ್ದ ವಿರಾಮವನ್ನು ನೀಡಲಾಗಿತ್ತು. ಆದರೆ, ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗಾಗಲಿ ಅಥವಾ ರಾಜ್ಯ ಘಟಕಕ್ಕಾಗಲಿ ವರದಿ ಮಾಡಿಕೊಳ್ಳುವ ಬದಲು ಸ್ವಯಂ ತರಬೇತಿಯಲ್ಲಿ ನಿರತರಾಗಿದ್ದರು. ಇಂತಹ ಸನ್ನಿವೇಶಗಳಲ್ಲಿ ಅವರಿಗೆ ಕೇಂದ್ರೀಯ ಗುತ್ತಿಗೆಯ ಆಮಂತ್ರಣ ನೀಡುವ ಸ್ಥಿತಿಯಲ್ಲಿ ಬಿಸಿಸಿಐ ಇರುವುದಿಲ್ಲ. ಅದೇ ರೀತಿ ನಾವು ಶ್ರೇಯಯಸ್ ಅಯ್ಯರ್ ವೈದ್ಯಕೀಯ ವರದಿಗಳನ್ನು ಗಮನಿಸಿದೆವು. ಅವರು ನಿಯಮಿತವಾಗಿ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದರೆ ಮಾತ್ರ, ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ಮುಕ್ತವಾಗಿದೆ” ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News