ಇಶಾನ್ ಕಿಶನ್ ಔಟಾದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆ, ಮ್ಯಾಚ್ ಫಿಕ್ಸಿಂಗ್ ಆರೋಪ

PC : X
ಹೈದರಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ಇಶಾನ್ ಕಿಶನ್ ಔಟಾದ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಾರೆ.
ಇನಿಂಗ್ಸ್‌ನ 3ನೇ ಓವರ್‌ನ ಮೊದಲ ಎಸೆತದಲ್ಲಿ ಕಿಶನ್ ಔಟಾದರು. ದೀಪಕ್ ಚಹಾರ್ ಎಸೆತವನ್ನು ಲೆಗ್ ಸೈಡ್‌ನತ್ತ ಬಾರಿಸಲು ಕಿಶನ್ ಮುಂದಾದರು. ಆದರೆ ಅದು ಸಾಧ್ಯವಾಗಲಿಲ್ಲ. ಚೆಂಡು ವಿಕೆಟ್‌ಕೀಪರ್ ರಿಯಾನ್ ರಿಕೆಲ್ಟನ್ ಕೈ ಸೇರಿತು. ಈ ವೇಳೆ ಮುಂಬೈ ತಂಡದ ಯಾರೊಬ್ಬರೂ ಔಟ್‌ಗಾಗಿ ಮನವಿ ಮಾಡಲಿಲ್ಲ. ಚಹಾರ್ ಮುಂದಿನ ಎಸೆತ ಎಸೆಯಲು ಸಿದ್ಧತೆ ನಡೆಸುತ್ತಿದ್ದಾಗ ಆನ್‌ಫೀಲ್ಡ್ ಅಂಪೈರ್ ವಿನೋದ್ ಶೇಷನ್ ಗೊಂದಲದಲ್ಲಿಯೇ ಔಟ್ ನೀಡಲು ಮುಂದಾದರು. ಇದನ್ನು ಗಮನಿಸಿದ ಚಹಾರ್ ವಿಕೆಟ್ ಕೀಪರ್ ಕಡೆಗೆ ನೋಡಿ ಔಟ್ ಗೆ ಮನವಿ ಮಾಡಿದರು. ಈ ಬೆಳವಣಿಗೆ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಹಿತ ಉಳಿದವರನ್ನೂ ಅಚ್ಚರಿಗೊಳಿಸಿತು.
ಇಷ್ಟೇಲ್ಲ ಆದರೂ ಕಿಶನ್ ಅವರು ಡಿಆರ್‌ಎಸ್ ಮೊರೆ ಹೋಗದೆ ನಗುತ್ತಲೇ ಪೆವಿಲಿಯನ್ ಕಡೆಗೆ ಹೊರಟರು.
ಅಲ್ಟ್ರಾ ಎಡ್ಜ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ಗೆ ತಾಗದಿರುವುದು ಸ್ಪಷ್ಟವಾಗಿತ್ತು. ಅದು ನೇರ ಪ್ರಸಾರವೂ ಆಗಿತ್ತು. ಅಷ್ಟರಲ್ಲಿ ಕಿಶನ್ ಬೌಂಡರಿ ಗೆರೆ ದಾಟಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇಶಾನ್ ಕಿಶನ್ ವಿಚಿತ್ರ ರೀತಿಯಲ್ಲಿ ಔಟಾದರು. ಮುಂಬೈ ತಂಡದ ಯಾರೊಬ್ಬರೂ ಔಟ್ ಗಾಗಿ ಮನವಿ ಮಾಡಲಿಲ್ಲ. ಇಶಾನ್ ಕಿಶನ್ ಕೂಡ ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ. ಆದರೂ ಅಂಪೈರ್ ಔಟ್ ನೀಡಿದರು. ಚೆಂಡು ಬ್ಯಾಟ್ ಗೆ ತಾಗಿಲ್ಲ ಎನ್ನುವುದು ಆಲ್ಟ್ರಾ ಎಡ್ಜ್ ಪರಿಶೀಲನೆ ವೇಳೆಯೂ ಸ್ಪಷ್ಟವಾಗಿತ್ತು. ಆದರೂ ಔಟ್ ನೀಡಿದ್ದೇಕೆ? ಫಿಕ್ಸಿಂಗ್ ನಡೆದಿದೆಯೇ? ಎಂದು ನೆಟ್ಟಿಗರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರಸಂಗ ಈ ಹಿಂದೆ ನೋಡಿರಲಿಲ್ಲ. ಈ ಕುರಿತು ತನಿಖೆಯಾಗಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.
ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ನನಗೆ ಮೊದಲ ಬಾರಿ ಅನಿಸುತ್ತಿದೆ. ಐಪಿಎಲ್‌ನಲ್ಲಿ ಪ್ರಾಮಾಣಿಕತೆ ಇಲ್ಲ, ಅದು ವೀಕ್ಷಕರ ವಿಶ್ವಾಸ ಕಳೆದುಕೊಂಡಿದೆ. ಇಶಾನ್ ಕಿಶನ್, ಅಂಪೈರ್‌ಗಳ ಕುರಿತು ತನಿಖೆ ನಡೆಯಬೇಕು. ಆಗ ಮ್ಯಾಚ್ ಫಿಕ್ಸಿಂಗ್ ಹೊರಬರುವುದು ನಿಶ್ಚಿತ ಎಂದು ಪ್ರವೀಣ್ ಎಂಬಾತ ಟ್ವೀಟಿಸಿದರು.