ಶೂಟಿಂಗ್ ವಿಶ್ವಕಪ್: ಸ್ವರ್ಣ ಗೆದ್ದ ಸುರುಚಿ ಸಿಂಗ್, ಸೌರಭ್ ಚೌಧರಿ
Photo Credit: ISSF/X
ಹೊಸದಿಲ್ಲಿ: ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದಿದ್ದ ಚೀನಾದ ಯವೋ ಕ್ಷಿಯಾನ್ಸುನ್ ಹಾಗೂ ಹು ಕೈ(585 ಅಂಕ)ಅವರನ್ನು 17-9 ಅಂತರದಿಂದ ಮಣಿಸಿದ ಸುರುಚಿ ಸಿಂಗ್ ಹಾಗೂ ಸೌರಭ್ ಚೌಧರಿ ಲಿಮಾದ ಪೆರುವಿನಲ್ಲಿ ಬುಧವಾರ ನಡೆದ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿದ ಭಾರತದ ಜೋಡಿ ಚಿನ್ನದ ಪದಕಕ್ಕಾಗಿ ನಡೆದ ಸ್ಪರ್ಧೆಗೆ ಅರ್ಹತೆ ಗಳಿಸಿತು. ಫೈನಲ್ ನಲ್ಲಿ 18ರ ಹರೆಯದ ಸುರುಚಿ ವಿಶ್ವಕಪ್ನಲ್ಲಿ 3ನೇ ಚಿನ್ನದ ಪದಕ ತನ್ನದಾಗಿಸಿಕೊಂಡರು. ಬ್ಯುನಸ್ ಐರಿಸ್ ಹಾಗೂ ಲಿಮಾದಲ್ಲಿ ವೈಯಕ್ತಿಕ ವಿಭಾಗದಲ್ಲಿ ಸುರುಚಿ ಸ್ವರ್ಣ ಜಯಿಸಿದ್ದರು.
22ರ ಹರೆಯದ ಸೌರಭ್ ವೃತ್ತಿಜೀವನದಲ್ಲಿ 9ನೇ ಬಾರಿ ವಿಶ್ವಕಪ್ನಲ್ಲಿ ಚಿನ್ನದ ಪದಕ ಜಯಿಸಿದರು. ಒಲಿಂಪಿಕ್ಸ್ನಲ್ಲಿ ಫೈನಲ್ಗೆ ತಲುಪಿದ್ದ ಸೌರಭ್ ಏಶ್ಯನ್ ಗೇಮ್ಸ್, ಯೂತ್ ಒಲಿಂಪಿಕ್ಸ್ ಹಾಗೂ ವರ್ಲ್ಡ್ ಜೂನಿಯರ್ಸ್ ಗಳಲ್ಲಿ ಚಾಂಪಿಯನ್ ಆಗಿದ್ದರು.
ಭಾರತದ ಇನ್ನೋರ್ವ ಜೋಡಿ ಮನು ಭಾಕರ್ ಹಾಗೂ ರವೀಂದರ್ ಸಿಂಗ್ ಅವರು ಚೀನಾದ ವಿರುದ್ಧ 17-6 ಅಂತರದಿಂದ ಜಯ ಸಾಧಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಮಹಿಳೆಯರ ಸ್ಕೀಟ್ನಲ್ಲಿ ಒಲಿಂಪಿಯನ್ ರೈಝಾ ದಿಲ್ಲೋನ್ ಫೈನಲ್ಗೆ ತಲುಪಿದ್ದರೂ 5ನೇ ಸ್ಥಾನ ಪಡೆದರು. ರೈಝಾ 117 ಅಂಕ ಗಳಿಸಿ ಟೈ ಸಾಧಿಸಿದ ನಂತರ ಫೈನಲ್ನ ಕೊನೆಯ ಸ್ಥಾನಕ್ಕಾಗಿ ನಡೆದ ಶೂಟ್-ಆಫ್ನಲ್ಲಿ ಕಝಕ್ಸ್ತಾನದ ರೆಯಾ ಕ್ರಾವ್ಚೆಂಕೊರನ್ನು 2-1 ಅಂತರದಿಂದ ಮಣಿಸಿದರು.
ಪುರುಷರ ಸ್ಕೀಟ್ನಲ್ಲಿ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ವಿಜೇತ ಅನಂತ್ಜೀತ್ ಸಿಂಗ್ 120 ಅಂಕ ಗಳಿಸಿ ಕೇವಲ ಒಂದು ಅಂಕದಿಂದ ಫೈನಲ್ನಿಂದ ವಂಚಿತರಾದರು.
6 ಪದಕಗಳ ಪೈಕಿ 5ನ್ನು ಗೆದ್ದುಕೊಂಡು ಸ್ಕೀಟ್ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದಿರುವ ಅಮೆರಿಕ ತಂಡವು 2 ಚಿನ್ನ, 2 ಬೆಳ್ಳಿ ಹಾಗೂ ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 2 ಚಿನ್ನ, 1 ಬೆಳ್ಳಿ, 1 ಕಂಚು ಜಯಿಸಿರುವ ಭಾರತವು 2ನೇ ಸ್ಥಾನದಲ್ಲೂ, ಚೀನಾ(1ಚಿನ್ನ, 1 ಬೆಳ್ಳಿ,3 ಕಂಚು)ಮೂರನೇ ಸ್ಥಾನದಲ್ಲಿದೆ.