ದ್ವಿಶತಕದ ಹಾದಿಯಲ್ಲಿ 2 ವಿಶ್ವ ದಾಖಲೆಗಳನ್ನು ಸೃಷ್ಟಿಸಿದ ಜೈಸ್ವಾಲ್

Update: 2024-02-18 16:43 GMT

 ಜೈಸ್ವಾಲ್ | Photo: PTI 

ರಾಜ್ಕೋಟ್: ಭಾರತದ ಯಶಸ್ವಿ ಜೈಸ್ವಾಲ್ ಟೆಸ್ಟ್ ನಲ್ಲಿ ಎರಡನೇ ದ್ವಿಶತಕವನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನ ಮೂರನೇ ದಿನವಾದ ಶನಿವಾರ ಭಾರತದ ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕನಾಗಿ ಬಂದ ಜೈಸ್ವಾಲ್ ಶತಕ ಪೂರೈಸಿದ ಸ್ವಲ್ಪವೇ ಹೊತ್ತಿನ ಬಳಿಕ ಗಾಯಗೊಂಡು ನಿವೃತ್ತಿಯಾದರು. ನಾಲ್ಕನೇ ದಿನವಾದ ರವಿವಾರ ಶುಭ್ ಮನ್ ಗಿಲ್ ನಿರ್ಗಮನದ ಬಳಿಕ ಅವರು ಮೈದಾನಕ್ಕೆ ಮರಳಿ ಆಟ ಮುಂದುವರಿಸಿದರು. ಅವರು ಎರಡನೇ ದ್ವಿಶತಕದ ಹಾದಿಯಲ್ಲಿ ಅವರು ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್ ಗಳನ್ನು ಬಾರಿಸಿರುವ ಪಾಕಿಸ್ತಾನದ ವಸೀಮ್ ಅಕ್ರಮ್ ರ ದಾಖಲೆಯನ್ನು ಸರಿಗಟ್ಟಿದರು. ಅಕ್ರಮ್ ಇನಿಂಗ್ಸ್ ಒಂದರಲ್ಲಿ 12 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.

ಅಕ್ರಮ್ 1996ರಲ್ಲಿ ಝಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ 12 ಸಿಕ್ಸರ್ ಗಳನ್ನು ಸಿಡಿಸಿದ್ದರು. 28 ವರ್ಷಗಳ ಬಳಿಕ, ಆ ಸಾಧನೆಯನ್ನು ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸರಿಗಟ್ಟಿದ್ದಾರೆ.

ಅದೂ ಅಲ್ಲದೆ, ಟೆಸ್ಟ್ ಸರಣಿಯೊಂದರಲ್ಲಿ 20 ಅಥವಾ ಅದಕ್ಕಿಂತಲೂ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿದ ಇತಿಹಾಸದ ಮೊದಲ ಬ್ಯಾಟರ್ ಆದರು. ಟೆಸ್ಟ್ ಕ್ರಿಕೆಟ್ನ 147 ವರ್ಷಗಳ ಇತಿಹಾಸದಲ್ಲಿ ಆಟಗಾರನೊಬ್ಬ 20ಕ್ಕಿಂತಲೂ ಅಧಿಕ ಸಿಕ್ಸರ್ ಗಳನ್ನು ಸಿಡಿಸಿರುವುದು ಇದೇ ಮೊದಲು.

ಜೈಸ್ವಾಲ್ರ ದಾಖಲೆಯ ಸಿಕ್ಸರ್ ಗಳ ಬಲದಿಂದ ಭಾರತವೂ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಭಾರತವು ಈಗಾಗಲೇ ಈ ಸರಣಿಯಲ್ಲಿ 48 ಸಿಕ್ಸರ್ ಗಳನ್ನು ಸಿಡಿಸಿದ್ದು, ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಸಂಖ್ಯೆಯ ಸಿಕ್ಸರ್ ಗಳನ್ನು ಸಿಡಿಸಿದ ತಂಡವಾಗಿದೆ. ಅದು ತನ್ನದೇ ದಾಖಲೆಯನ್ನು ಉತ್ತಮಪಡಿಸಿದೆ. 2019ರಲ್ಲಿ ಭಾರತವು ದಕ್ಷಿಣ ಆಫ್ರಿಕ ವಿರುದ್ಧ ಬಾರಿಸಿದ 47 ಸಿಕ್ಸರ್ ಗಳು ಈವರೆಗಿನ ದಾಖಲೆಯಾಗಿತ್ತು.

43 ಸಿಕ್ಸರ್ ಗಳೊಂದಿಗೆ ಇಂಗ್ಲೆಂಡ್ ಎರಡನೇ ಮತ್ತು 40 ಸಿಕ್ಸರ್ ಗಳೊಂದಿಗೆ ಆಸ್ಟ್ರೇಲಿಯ ಮೂರನೇ ಸ್ಥಾನಗಳಲ್ಲಿವೆ.

ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಬಾರಿಸಿರುವ ತನ್ನ ಸಾಧನೆಯನ್ನೂ ಭಾರತ ಉತ್ತಮಪಡಿಸಿಕೊಂಡಿದೆ. ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ತಂಡವು 28 ಸಿಕ್ಸರ್ ಗಳನ್ನು ಬಾರಿಸಿದೆ. ಅದರ ಹಿಂದಿನ ಶ್ರೇಷ್ಠ ಸಾಧನೆ 27 ಸಿಕ್ಸರ್ ಆಗಿತ್ತು. ಅದು ಈ ಸಾಧನೆಯನ್ನು 2019ರಲ್ಲಿ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ನಲ್ಲಿ ಮಾಡಿತ್ತು.

ಇಂಗ್ಲೆಂಡ್ ವಿರುದ್ಧ ಎರಡನೇ ಇನಿಂಗ್ಸ್ನಲ್ಲಿ ಭಾರತವು ಒಟ್ಟು 18 ಸಿಕ್ಸರ್ ಗಳನ್ನು ಬಾರಿಸಿದೆ. ಇದು ಕೂಡ ತಂಡದ ದಾಖಲೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News