ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ 10ಕ್ಕೇರಿದ ಜೈಸ್ವಾಲ್

Update: 2024-03-06 16:29 GMT

 ಜೈಸ್ವಾಲ್ | Photo: PTI

ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಬುಧವಾರ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಹಾಲಿ ಟೆಸ್ಟ್ ಸರಣಿಯಲ್ಲಿ ಅವರು ನೀಡಿರುವ ಅಮೋಘ ನಿರ್ವಹಣೆಯಿಂದಾಗಿ ಅವು ಈ ಸಾಧನೆಗೈದಿದ್ದಾರೆ.

2023ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಜೈಸ್ವಾಲ್ ಎರಡು ಸ್ಥಾನ ಮೇಲಕ್ಕೇರಿ 10ನೇ ಸ್ಥಾನವನ್ನು ತಲುಪಿದ್ದಾರೆ. ಅವರು 727 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಹಾಲಿ ಸರಣಿಯಲ್ಲಿ ಜೈಸ್ವಾಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಈಗಾಗಲೇ, ಟೆಸ್ಟ್ ಸರಣಿಯೊಂದರಲ್ಲಿ 600ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿಇರುವ ಭಾರತೀಯ ಬ್ಯಾಟರ್‌ಗಳ ವಿಶಿಷ್ಟ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಾಧನೆಗೈದ ಏಕೈಕ ಎಡಗೈ ಬ್ಯಾಟರ್ ಅವರಾಗಿದ್ದಾರೆ.

ಟೆಸ್ಟ್ ಸರಣಿಯೊಂದರಲ್ಲಿ 600ಕ್ಕಿಂತಲೂ ಹೆಚ್ಚು ರನ್‌ಗಳನ್ನು ಗಳಿಸಿರುವ ಐದನೇ ಭಾರತೀಯ ಅವರಾಗಿದ್ದಾರೆ. ಈ ಸಾಧನೆಗೈದ ಇತರರೆಂದರೆ- ಸುನೀಲ್ ಗವಾಸ್ಕರ್, ದಿಲೀಪ್ ವೆಂಗಿಸರ್ಕಾರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ.

ಅವರು ನಾಲ್ಕು ಟೆಸ್ಟ್‌ಗಳಲ್ಲಿ 93.57ರ ಸರಾಸರಿಯಲ್ಲಿ 655 ರನ್‌ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕಗಳು ಮತ್ತು ಎರಡು ದ್ವಿಶತಕಗಳು ಸೇರಿವೆ. ಅವರು ಈಗ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್‌ಗಳನ್ನು ಗಳಿಸಿರುವ ಭಾರತೀಯ ಬ್ಯಾಟರ್ ಎಂಬ ಸುನೀಲ್ ಗವಾಸ್ಕರ್‌ರ ಸಾಧನೆಗೆ ಸ್ಪರ್ಧೆ ನೀಡುತ್ತಿದ್ದಾರೆ. ಸುನೀಲ್ ಗವಾಸ್ಕರ್ ಸರಣಿಯೊಂದರಲ್ಲಿ 774 ರನ್‌ಗಳನ್ನು ಕಲೆಹಾಕಿದ್ದಾರೆ.

ಈ ನಡುವೆ, ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ 131 ರನ್‌ಗಳನ್ನು ಗಳಿಸಿರುವ ನಾಯಕ ರೋಹಿತ್ ಶರ್ಮ ಎರಡು ಸ್ಥಾನಗಳನ್ನು ಮೇಲೇರಿ 11ನೇ ಸ್ಥಾನ ಗಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಇಡೀ ಸರಣಿಯಿಂದ ಹೊರಗಿರುವ ವಿರಾಟ್ ಕೊಹ್ಲಿ ಕೂಡ ಒಂದು ಸ್ಥಾನ ಮೇಲಕ್ಕೇರಿ ಎಂಟರಲ್ಲಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ, ಭಾರತದ ರವೀಂದ್ರ ಜಡೇಜ ಒಂದು ಸ್ಥಾನ ಕೆಳಕ್ಕೆ ಜಾರಿ ಏಳನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News