ಯಶಸ್ವಿ ಜೈಸ್ವಾಲ್ ವಿಶ್ವ ದಾಖಲೆ ಮುರಿದ ಆಯುಷ್ ಮ್ಹಾತ್ರೆ
ಅಹ್ಮದಾಬಾದ್ : ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಮಂಗಳವಾರ ನಾಗಾಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಮುಂಬೈನ ಉದಯೋನ್ಮುಖ ತಾರೆ ಆಯುಷ್ ಮ್ಹಾತ್ರೆ ತಮ್ಮದೇ ರಾಜ್ಯದ ಯಶಸ್ವಿ ಜೈಸ್ವಾಲ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದರು.
ಕೇವಲ 17 ವರ್ಷ, 168 ದಿನಗಳ ವಯಸ್ಸಿನ ಮ್ಹಾತ್ರೆ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡು, ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ರ ದಾಖಲೆ ಮುರಿದರು. ಮುಂಬೈನ ಜೈಸ್ವಾಲ್ 2019ರಲ್ಲಿ ಜಾರ್ಖಂಡ್ ವಿರುದ್ಧ 17 ವರ್ಷ ಹಾಗೂ 291ನೇ ದಿನದಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ್ದರು.
ಕೆಳ ದರ್ಜೆಯ ಬೌಲಿಂಗ್ ದಾಳಿಯ ಎದುರು ಆಡಿದ ಹೊರತಾಗಿಯೂ ಆಯುಷ್ ಅವರ ಇನಿಂಗ್ಸ್, ಟೈಮಿಂಗ್ ವಿಚಾರದಲ್ಲಿ ಮಾಸ್ಟರ್ ಕ್ಲಾಸ್ ಆಗಿದೆ. ಇನಿಂಗ್ಸ್ ಆರಂಭಿಸಿದ ಆಯುಷ್ ತನ್ನ ವಯಸ್ಸಿಗಿಂತ ಮಿಗಿಲಾದ ಪ್ರಬುದ್ಧತೆ ಪ್ರದರ್ಶಿಸಿದರು. ಆಯುಷ್ ಅವರ 181 ರನ್ ಇನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 11 ಸಿಕ್ಸರ್‌ಗಳಿದ್ದವು.
*ಲಿಸ್ಟ್ ಎ ಕ್ರಿಕೆಟ್‌ನಲ್ಲಿ 150 ಪ್ಲಸ್ ಸ್ಕೋರ್ ಗಳಿಸಿದ ಯುವ ಆಟಗಾರರು
17 ವರ್ಷ, 168 ದಿನ-ಆಯುಷ್ ಮ್ಹಾತ್ರೆ(ಮುಂಬೈ)
17 ವರ್ಷ, 291 ದಿನ-ಯಶಸ್ವಿ ಜೈಸ್ವಾಲ್(ಮುಂಬೈ)
19 ವರ್ಷ, 63 ದಿನ-ರಾಬಿನ್ ಉತ್ತಪ್ಪ(ಕರ್ನಾಟಕ)
19 ವರ್ಷ,139 ದಿನ-ಟಾಮ್ ಪ್ರೆಸ್ಟ್(ಹ್ಯಾಂಪ್‌ಶೈರ್, ಇಂಗ್ಲೆಂಡ್)