ಈ ವರ್ಷ 50 ಟೆಸ್ಟ್ ವಿಕೆಟ್ ಗಳನ್ನು ಉರುಳಿಸಿದ ಮೊದಲ ಬೌಲರ್ ಜಸ್ಪ್ರಿತ್ ಬುಮ್ರಾ

Update: 2024-12-06 15:09 GMT

 ಜಸ್ಪ್ರಿತ್ ಬುಮ್ರಾ | PTI 

ಅಡಿಲೇಡ್ : ಈ ವರ್ಷ 50 ಟೆಸ್ಟ್ ವಿಕೆಟ್ ಗಳನ್ನು ಉರುಳಿಸಿದ ಮೊದಲ ಬೌಲರ್ ಎನಿಸಿಕೊಂಡಿರುವ ಜಸ್ಪ್ರಿತ್ ಬುಮ್ರಾ ಮಹತ್ವದ ಸಾಧನೆ ಮಾಡಿದ್ದಾರೆ. 

ಭಾರತದ ಸ್ಟಾರ್ ವೇಗದ ಬೌಲರ್ ಬುಮ್ರಾ ಆಸ್ಟ್ರೇಲಿಯ ತಂಡದ ವಿರುದ್ಧ ಶುಕ್ರವಾರ ಅಡಿಲೇಡ್ ಓವಲ್ ನಲ್ಲಿ ಆರಂಭವಾದ ಪಿಂಕ್-ಬಾಲ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಈ ಸಾಧನೆ ಮಾಡಿದ್ದಾರೆ.

ತನ್ನ 31ನೇ ಹುಟ್ಟುಹಬ್ಬವನ್ನು ಆಚರಿಸಿರುವ ಬುಮ್ರಾ ಅವರು ಆಸ್ಟ್ರೇಲಿಯದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾರನ್ನು ಔಟ್ ಮಾಡಿ ತನ್ನ 50ನೇ ವಿಕೆಟ್ ಪಡೆದರು. ಖ್ಜಾಜಾ ಮೊದಲ ಸ್ಲಿಪ್ ನಲ್ಲಿ ಫೀಲ್ಡಿಂಗ್ ನಿರತ ನಾಯಕ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಬುಮ್ರಾ ಅವರು ಕ್ಯಾಲೆಂಡರ್ ವರ್ಷದಲ್ಲಿ ಈ ಮೈಲಿಗಲ್ಲು ತಲುಪಿದ ಭಾರತದ 3ನೇ ಬೌಲರ್ ಆಗಿದ್ದಾರೆ. ಈ ಹಿಂದೆ ಕಪಿಲ್ದೇವ್(1979ರಲ್ಲಿ 74 ಹಾಗೂ 1983ರಲ್ಲಿ 75 ವಿಕೆಟ್) ಹಾಗೂ ಝಹೀರ್ ಖಾನ್(2022ರಲ್ಲಿ 51)ಈ ಸಾಧನೆ ಮಾಡಿದ್ದರು.

ಬುಮ್ರಾ ಅವರು 2019ರ ನಂತರ ಕ್ಯಾಲೆಂಡರ್ ವರ್ಷದಲ್ಲಿ 50 ಪ್ಲಸ್ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡರು. 2019ರಲ್ಲಿ ಪ್ಯಾಟ್ ಕಮಿನ್ಸ್ ಈ ಸಾಧನೆ ಮಾಡಿದ್ದರು.

ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸಿರೀಸ್ ನಲ್ಲಿ 54 ವಿಕೆಟ್ಗಳನ್ನು ಪಡೆದಿರುವ ಬುಮ್ರಾ ಬೌಲರ್ ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕನಿಷ್ಠ 50 ವಿಕೆಟ್ಗಳನ್ನು ಪಡೆದಿರುವ ಬೌಲರ್ ಗಳಲ್ಲಿ ಬುಮ್ರಾ ಅವರು 15.29 ಸರಾಸರಿಯನ್ನು ಹೊಂದಿದ್ದಾರೆ.

►ಶೂನ್ಯಕ್ಕೆ ಔಟಾದ 4ನೇ ಬೌಲರ್ ಬುಮ್ರಾ

ಬುಮ್ರಾ ಅವರು ತನ್ನ ಹುಟ್ಟುಹಬ್ಬದಂದು ಬ್ಯಾಟಿಂಗ್ ವೇಳೆ ಶೂನ್ಯಕ್ಕೆ ಔಟಾದ ಭಾರತದ 4ನೇ ಆಟಗಾರ ಎನಿಸಿಕೊಂಡರು.

ಮಾಜಿ ವಿಕೆಟ್ಕೀಪರ್-ಬ್ಯಾಟರ್ ಸಯ್ಯದ್ ಕೀರ್ಮಾನಿ ತನ್ನ ಜನ್ಮದಿನದಂದು ಶೂನ್ಯಕ್ಕೆ ಔಟಾದ ಮೊದಲ ಭಾರತೀಯನಾಗಿದ್ದಾರೆ. 1978ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಕೋಲ್ಕತಾ ಟೆಸ್ಟ್ನಲ್ಲಿ ತನ್ನ 29ನೇ ಹುಟ್ಟುಹಬ್ಬದಂದು ಶೂನ್ಯ ಸಂಪಾದಿಸಿದ್ದರು.

ಆ ನಂತರ ವೆಂಕಟಪತಿ ರಾಜು ತನ್ನ 27ನೇ ಹುಟ್ಟುಹಬ್ಬದಂದು 1996ರಲ್ಲಿ ನಾಟಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಸೊನ್ನೆ ಸುತ್ತಿದ್ದರು.

ಬುಮ್ರಾಗಿಂತ ಮೊದಲು ಇಶಾಂಶ್ ಶರ್ಮಾ 2018ರಲ್ಲಿ ತನ್ನ ಜನ್ಮದಿನದಂದು ಸೌತಾಂಪ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರನ್ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು.

ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಟೆಸ್ಟ್ ವಿಕೆಟ್ಗಳನ್ನು ಪಡೆದ ಭಾರತದ ವೇಗಿಗಳು

ಆಟಗಾರ ವರ್ಷ ಟೆಸ್ಟ್ ವಿಕೆಟ್ ಸರಾಸರಿ 5/10 ವಿಕೆಟ್

ಕಪಿಲ್ದೇವ್ 1983 18 75 23.18 5/1

ಕಪಿಲ್ ದೇವ್ 1979 17 74 22.95 5/0

ಝಹೀರ್ ಖಾನ್ 2002 15 51 29.00 2/0

ಜಸ್ಪ್ರಿತ್ ಬುಮ್ರಾ 2024 11 50 15.20 3/0

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News