ಜೂನಿಯರ್ ಹಾಕಿ ವಿಶ್ವಕಪ್-2023 ; ಗೆಲುವಿನ ಆರಂಭದ ನಿರೀಕ್ಷೆಯಲ್ಲಿರುವ ಭಾರತಕ್ಕೆ ಕೊರಿಯಾ ಮೊದಲ ಎದುರಾಳಿ
ಹೊಸದಿಲ್ಲಿ: ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವು ಮಲೇಶ್ಯದಲ್ಲಿ ನಡೆಯಲಿರುವ 2023ರ ವಿಶ್ವಕಪ್ನಲ್ಲಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸುವ ಗುರಿ ಇಟ್ಟುಕೊಂಡಿದೆ. ಮಂಗಳವಾರ ಕೌಲಾಲಂಪುರದ ನ್ಯಾಶನಲ್ ಹಾಕಿ ಸ್ಟೇಡಿಯಮ್ನಲ್ಲಿ ಆಡಲಿರುವ ಸಿ ಗುಂಪಿನ ಮೊದಲ ಪಂದ್ಯದಲ್ಲಿ ಏಶ್ಯದ ಎದುರಾಳಿ ಕೊರಿಯಾದ ಸವಾಲನ್ನು ಎದುರಿಸಲಿದೆ.
ಭಾರತ ತಂಡ ಭಾರೀ ವಿಶ್ವಾಸದೊಂದಿಗೆ ಈ ಸ್ಫರ್ಧೆಗೆ ಧುಮುಕಲಿದ್ದು, ಕೊರಿಯಾ ವಿರುದ್ಧ ಮುಖಾಮುಖಿಯಲ್ಲಿ ಉತ್ತಮ ದಾಖಲೆ ಹೊಂದಿದೆ. ಉಭಯ ತಂಡಗಳು ಆಡಿರುವ ಆರು ಪಂದ್ಯಗಳ ಪೈಕಿ ಭಾರತವು ಮೂರರಲ್ಲಿ ಜಯ ಸಾಧಿಸಿದ್ದು, ಕೊರಿಯಾ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ.
ಉಭಯ ತಂಡಗಳು ಈ ವರ್ಷಾರಂಭದಲ್ಲಿ ನಡೆದ ಪುರುಷರ ಜೂನಿಯರ್ ಏಶ್ಯಕಪ್ನ ಸೆಮಿ ಫೈನಲ್ನಲ್ಲಿ ಪರಸ್ಪರ ಹೋರಾಟ ನಡೆಸಿದ್ದವು. ಭಾರತವು ಕೊರಿಯದ ವಿರುದ್ಧ 9-1 ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು.
ಮೊದಲ ಪಂದ್ಯಕ್ಕಿಂತ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ಉತ್ತಮ್ ಸಿಂಗ್, ವಿಶ್ವಕಪ್ಗಾಗಿ ಕಾಯುವಿಕೆಯು ಕೊನೆಗೂ ಅಂತ್ಯವಾಗಿದೆ. ನಮಗೆ ಉತ್ತಮ ಆರಂಭ ಪಡೆಯುವ ಕುರಿತು ಭಾರೀ ಆತ್ಮವಿಶ್ವಾಸವಿದೆ. ನಾವು ಇತ್ತೀಚೆಗೆ ಕೊರಿಯಾ ವಿರುದ್ಧ ಆಡಿದ್ದೆವು. ಹೀಗಾಗಿ ನಮಗೆ ಸವಾಲಿನ ಅರಿವಿದೆ. ನಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹಾಗೂ ಉತ್ತಮ ಹಾಕಿ ಆಡುವತ್ತ ನಮ್ಮ ಗಮನ ಇರಲಿದೆ ಎಂದರು.
ಆಟಗಾರರು ಕಠಿಣ ಶ್ರಮಪಡುತ್ತಿದ್ದು, ಟೂರ್ನಮೆಂಟ್ಗೆ ಸಂಪೂರ್ಣ ತಯಾರಿಯಾಗಿದ್ದಾರೆ. ಕೊರಿಯಾ ಬಲಿಷ್ಠ ತಂಡವಾಗಿದ್ದು, ಅದನ್ನು ನಾವು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ನಾವು ಪ್ರತಿಯೊಂದು ಎದುರಾಳಿಯನ್ನು ಗೌರವಿಸಬೇಕು. ಇದು ಪ್ರಮುಖ ಟೂರ್ನಿಯಾಗಿದ್ದು, ನಾವೆಲ್ಲರೂ ಎಚ್ಚರಿಕೆಯಿಂದಿರಬೇಕು. ಟೂರ್ನಮೆಂಟ್ನಲ್ಲಿ ಶ್ರೇಷ್ಠ ಆರಂಭ ಪಡೆಯುವ ನಿಟ್ಟಿನಲ್ಲಿ ನಮ್ಮ ಶಕ್ತಿಯನ್ನು ಬಳಸಬೇಕು ಎಂದು ಕೋಚ್ ಸಿಆರ್ ಕುಮಾರ್ ಹೇಳಿದ್ದಾರೆ.
ಎರಡು ಬಾರಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ಭಾರತವು ಡಿಸೆಂಬರ್ 7ರಂದು ಸ್ಪೇನ್ ಹಾಗೂ ಡಿ.9ರಂದು ಕೆನಡಾ ತಂಡವನ್ನು ಎದುರಿಸಲಿದೆ. ಗ್ರೂಪ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲಿದೆ.
2021ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಪುರುಷರ ಜೂನಿಯರ್ ವಿಶ್ವಕಪ್ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತೀಯ ತಂಡದ ಭಾಗವಾಗಿದ್ದ ಉತ್ತಮ್ ಸಿಂಗ್, ತಂಡವು ಒಂದು ಬಾರಿ ಒಂದೇ ಪಂದ್ಯ ಗೆಲ್ಲುವತ್ತ ಗಮನ ಹರಿಸಲಿದೆ ಎಂದರು.
ನಾವು ಯಾವಾಗಲೂ ಪಂದ್ಯದಿಂದ ಪಂದ್ಯಕ್ಕೆ ನಮ್ಮ ಗಮನ ಹರಿಸುವೆವು. ಗೆಲುವಿನ ಆರಂಭ ಪಡೆಯುವುದು ನಮ್ಮ ಆದ್ಯತೆ. ಆ ನಂತರ ಪಂದ್ಯಾವಳಿಯ ಮುಂದಿನ ಹಂತದತ್ತ ನಡೆಯಲು ಗಮನ ನೀಡುವೆವು ಎಂದರು.
ಟೂರ್ನಮೆಂಟ್ನ ನಾಕೌಟ್ ಹಂತವು ಡಿಸೆಂಬರ್ 12ರಂದು ಆರಂಭವಾಗಲಿದೆ.