ಹೆಚ್ಚುತ್ತಿರುವ ‘ರಿಟೈರ್ಡ್ ಔಟ್’ ಪ್ರವೃತ್ತಿಯನ್ನು ಪ್ರಶ್ನಿಸಿದ ಕೈಫ್

Update: 2025-04-09 21:22 IST
MohammadKaif

ಮುಹಮ್ಮದ್ ಕೈಫ್ | PC :  X \ @MohammadKaif 

  • whatsapp icon

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚುತ್ತಿರುವ ‘ರಿಟೈರ್ಡ್ ಔಟ್’ ತಂತ್ರಗಾರಿಕೆ ಪ್ರವೃತ್ತಿಯನ್ನು ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಪ್ರಶ್ನಿಸಿದ್ದಾರೆ. ಇದು ತಂತ್ರಗಾರಿಕೆಗಿಂತಲೂ ಹೆಚ್ಚಾಗಿ ಹತಾಶೆಯ ಕೃತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಲ್ಲನ್‌ ಪುರದಲ್ಲಿ ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಆರಂಭಿಕ ಆಟಗಾರ ಡೇವನ್ ಕಾನ್ವೇಯವರನ್ನು ರಿಟೈರ್ಡ್ ಔಟ್ ಮಾಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

49 ಎಸೆತಗಳಲ್ಲಿ 69 ರನ್‌ಗಳನ್ನು ಗಳಿಸಿ ಸುಲಲಿತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕಾನ್ವೇ 18ನೇ ಓವರ್‌ನಲ್ಲಿ ಪೆವಿಲಿಯನ್‌ಗೆ ನಡೆದರು. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 220 ರನ್‌ಗಳ ಗುರಿಯನ್ನು ಬೆನ್ನತ್ತಿತ್ತು. ಆ ಸಂದರ್ಭದಲ್ಲಿ ಚೆನ್ನೈ ಗೆಲುವಿಗೆ 13 ಎಸೆತಗಳಲ್ಲಿ 49 ರನ್‌ಗಳ ಅಗತ್ಯವಿತ್ತು. ಅವರ ಸ್ಥಳಕ್ಕೆ ರವೀಂದ್ರ ಜಡೇಜರನ್ನು ತರಲಾಯಿತು. ಆದಾಗ್ಯೂ, ಅಂತಿಮವಾಗಿ ಚೆನ್ನೈ 18 ರನ್‌ಗಳ ಸೋಲನುಭವಿಸಿತು.

ಇದಕ್ಕೂ ಮೊದಲು, ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತನ್ನ ಆಟಗಾರ ತಿಲಕ್ ವರ್ಮಾರನ್ನು ರಿಟೈರ್ಡ್ ಔಟ್ ಮಾಡಿಸಿ ಪೆವಿಲಿಯನ್‌ಗೆ ಕರೆದಿತ್ತು.

ಈ ಪ್ರವೃತ್ತಿಯ ಬಗ್ಗೆ ಕೈಫ್ ‘ಎಕ್ಸ್’ನಲ್ಲಿ ಹೀಗೆ ಬರೆದಿದ್ದಾರೆ: ‘‘ತಂಡಗಳು ರಿಟೈರ್ಡ್ ಔಟ್ ಆಯ್ಕೆಯನ್ನು ಹತಾಶೆಯಿಂದ ಬಳಸಿಕೊಳ್ಳುತ್ತಿವೆ. ಇದು ಯಶಸ್ಸು ನೀಡದ ತಂತ್ರಗಾರಿಕೆಯಾಗಿದೆ. ಯಾಕೆಂದರೆ, ತಾವು ಎದುರಿಸುವ ಮೊದಲ ಎಸೆತವನ್ನೇ ಸಿಕ್ಸರ್‌ ಗೆ ಅಟ್ಟಬಲ್ಲ ಆಟಗಾರರು ಹೆಚ್ಚಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಕ್ರೀಸ್‌ ನಲ್ಲಿ ಮೊದಲು ಪರದಾಡುತ್ತಿದ್ದ ಬ್ಯಾಟರ್‌ಗಳೇ ಪಂದ್ಯವನ್ನು ಗೆಲ್ಲಿಸಿದ ನಿದರ್ಶನಗಳಿವೆ. ತೆವಾಟಿಯ 5 ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿರುವುದನ್ನು ನೆನಪಿಸಿಕೊಳ್ಳಿ. ಅದಕ್ಕಿಂತಲೂ ಮೊದಲು ಅವರು 19 ಎಸೆತಗಳಲ್ಲಿ ಕೇವಲ 8 ರನ್‌ಗಳನ್ನು ಗಳಿಸಿದ್ದರು’’ ಎಂದು ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News