ಕಲಬುರಗಿ ಐಟಿಎಫ್ ಓಪನ್ ಟೆನಿಸ್ ಟೂರ್ನಿ: ರಶ್ಯದ ಜೋಡಿಗೆ ಡಬಲ್ಸ್ ಚಾಂಪಿಯನ್ ಕಿರೀಟ
ಕಲಬುರಗಿ: ಐಟಿಎಫ್ ಕಲಬುರಗಿ ಪುರುಷರ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಸೆಮಿ ಫೈನಲ್, ಡಬಲ್ಸ್ ಫೈನಲ್ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದ ಭಾರತೀಯ ಆಟಗಾರರಿಗೆ ನಿರಾಶೆಯಾಗಿದ್ದು, ರಶ್ಯದ ಜೋಡಿ ಎಗೋರ್ ಆಗಾಪೋನೊವ್ ಹಾಗೂ ಬೊಬ್ರೊವ್ ಡಬಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದರು.
ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ದೇವ್ ಜಾವಿಯಾ ಅವರು ಉಜ್ಬೇಕಿಸ್ತಾನದ ಖುಮೊಯುನ್ ಸುಲ್ತಾನೋವ್ ಎದುರು 7-6, (7-5), 6-2 ಸೆಟ್‌ಗಳ ಅಂತರದಿಂದ ಪರಾಭವಗೊಂಡರು. ಸುಲ್ತಾನೋವ್, ರಶ್ಯದ ಬೊಗ್ಡಾನ್ ಬೊಬ್ರೋವ್ ಅವರೊಂದಿಗೆ ರವಿವಾರ ಫೈನಲ್ ಪಂದ್ಯ ಆಡಲಿದ್ದಾರೆ.
ಇನ್ನೊಂದು ಸೆಮಿ ಫೈನಲ್ ಕದನದಲ್ಲಿ ರಶ್ಯದ ಬೊಗ್ಡಾನ್ ಬೊಬ್ರೋವ್ ಅಮೆರಿಕದ ನಿಕ್ ಚಾಪೆಲ್ ವಿರುದ್ಧ 6-3, 6-0 ನೇರ ಸೆಟ್‌ಗಳ ಅಂತರದಲ್ಲಿ ಗೆದ್ದು ಬೀಗಿದರು.
*ಡಬಲ್ಸ್ ನಲ್ಲಿ ರಶ್ಯ ಜೋಡಿಗೆ ಚಾಂಪಿಯನ್ ಪಟ್ಟ
ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ರಶ್ಯ ಜೋಡಿಯಾಗಿರುವ ಎಗೋರ್ ಆಗಾಪೋನೊವ್ ಹಾಗೂ ಬೊಬ್ರೊವ್ ಜೋಡಿಯು ಅಮೆರಿಕದ ನಿಕ್ ಚಾಪೆಲ್ ಮತ್ತು ಭಾರತದ ನಿತಿನ್ ಕುಮಾರ್ ಸಿನ್ಹಾ ಜೋಡಿಗೆ 7-5, 6-2 ಅಂತರದಲ್ಲಿ ಸೋಲುಣಿಸಿದರು. ಈ ಮೂಲಕ ಐಟಿಎಫ್ ಕಲಬುರಗಿ ಪುರುಷರ ಓಪನ್ ಟೆನಿಸ್ ಪಂದ್ಯಾವಳಿಯ ಡಬಲ್ಸ್ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಟೂರ್ನಿಯ ಡಬಲ್ಸ್ ಚಾಂಪಿಯನ್ನರಿಗೆ 1,550 ಅಮೆರಿಕನ್ ಡಾಲರ್ ಮೊತ್ತದ ಪ್ರಶಸ್ತಿ ಹಾಗೂ ರನ್ನರ್ ಅಪ್ ಗಳಿಗೆ 900 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತ ಪ್ರದಾನ ಮಾಡಲಾಯಿತು.
ವಿಶೇಷ ಕೇಶ ವಿನ್ಯಾಸ ಹೊಂದಿರುವ ಬೊಬ್ರೋವ್ ನಾಲ್ಕನೇ ಡಬಲ್ಸ್ ಪ್ರಶಸ್ತಿ ಪಡೆದುಕೊಂಡರೆ ಭಾರತದ ನೆಲದಲ್ಲೇಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡರು. ಎಗೋರ್ ಆಗಾಫೋನೋವ್ ಭುವನೇಶ್ವರದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.