ಕರ್ನಾಟಕ ಕ್ರಿಕೆಟ್ ತಂಡದ ನಂಟು ತೊರೆದು ವಿದರ್ಭದತ್ತ ಮುಖ ಮಾಡಿದ ಕರುಣ್ ನಾಯರ್

Update: 2023-08-27 15:22 GMT

Photo:PTI

ಬೆಂಗಳೂರು: ನಾನು 2023-24ರ ಋತುವಿನಲ್ಲಿ ವಿದರ್ಭ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವೆ ಎಂದು ಕರ್ನಾಟಕದ ಬ್ಯಾಟರ್ ಕರುಣ್ ನಾಯರ್ ರವಿವಾರ ಪ್ರಕಟಿಸಿದ್ದಾರೆ. ಕರುಣ್ ನಾಯರ್ ಅವರು ವಿದರ್ಭ ಕ್ರಿಕೆಟ್ ಸಂಸ್ಥೆ(ವಿಸಿಎ)ಸೇರುವ ನಿರ್ಧಾರವನ್ನು ಇನ್‌ಸ್ಟಾಗ್ರಾಮ್ ಮೂಲಕ ಘೋಷಿಸಿದರು.

ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ನನ್ನ ಅದ್ಭುತ ಪ್ರಯಾಣಕ್ಕಾಗಿ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲು ನಾನು ಈ ಅವಕಾಶವನ್ನು ಬಳಸಲು ಇಷ್ಟಪಡುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ ಕೆಎಸ್‌ಸಿಎ ಮಾರ್ಗದರ್ಶಿ ಬೆಳಕಾಗಿದ್ದು, ಅಚಲವಾದ ಬೆಂಬಲವನ್ನು ನೀಡಿದೆ. ಅದು ನನ್ನನ್ನು ಆಟಗಾರನಾಗಿ ರೂಪಿಸಲು ನೆರವಾಯಿತು ಎಂದು ಕರುಣ್ ನಾಯರ್ ಹೇಳಿದ್ದಾರೆ.

ನಾನು ವಿದರ್ಭ ಕ್ರಿಕೆಟ್ ಸಂಸ್ಥೆಯೊಂದಿಗೆ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವಾಗ ನಾನು ಕೆಎಸ್‌ಸಿಎ ಜೊತೆಗಿದ್ದ ಸಮಯದಲ್ಲಿ ಗಳಿಸಿರುವ ನೆನಪುಗಳು, ಸ್ನೇಹ ಹಾಗೂ ಕೌಶಲ್ಯಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನನ್ನ ಕ್ರಿಕೆಟ್ ಪಯಣದ ಅವಿಭಾಜ್ಯ ಅಂಗವಾಗಿದ್ದಕ್ಕೆ ಧನ್ಯವಾದಗಳು. ಈಗ ಮುಂದಿನ ರೋಚಕ ಸಾಹಸಕ್ಕೆ ಮುಂದಾಗಲಿದ್ದೇನೆ ಎಂದು ನಾಯರ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

31ರ ಹರೆಯದ ನಾಯರ್ 2013ರಲ್ಲಿ ಕರ್ನಾಟಕದ ಪರ ಚೊಚ್ಚಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. 87 ಇನಿಂಗ್ಸ್‌ಗಳಲ್ಲಿ 11 ಶತಕ ಹಾಗೂ 16 ಅರ್ಧಶತಕಗಳ ಸಹಿತ ಒಟ್ಟು 3779 ರನ್ ಗಳಿಸಿದ್ದರು.ಕರ್ನಾಟಕ 2013-14 ಹಾಗೂ 2014-15ರಲ್ಲಿ ಸತತ ಎರಡು ರಣಜಿ ಟ್ರೋಫಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು..

ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿರುವ 2013-14ರಲ್ಲಿ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ಪಂದ್ಯ ಸಹಿತ ಸತತ 3 ಶತಕಗಳನ್ನು ಗಳಿಸಿದ್ದ ನಾಯರ್ ಕರ್ನಾಟಕವು 15 ವರ್ಷಗಳ ನಂತರ ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿ ಗೆಲ್ಲುವಲ್ಲಿಯೂ ನೆರವಾಗಿದ್ದರು. 2014-15ರಲ್ಲಿ ತಮಿಳುನಾಡು ವಿರುದ್ಧ ಫೈನಲ್‌ನಲ್ಲಿ 328 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಲ್ಲದೆ ಕರ್ನಾಟಕ ತಂಡವು ರಣಜಿ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲು ಕಾರಣರಾಗಿದ್ದರು.

2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ತನ್ನ ವೃತ್ತಿಜೀವನದ ಮೂರನೇ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಸಿಡಿಸಿದ ಭಾರತದ 2ನೇ ಹಾಗೂ ವಿಶ್ವದ 3ನೇ ಆಟಗಾರ ಎನಿಸಿಕೊಂಡಿದ್ದರು. ನಾಯರ್ ಚೆನ್ನೈನಲ್ಲಿ ಔಟಾಗದೆ 303 ರನ್ ಗಳಿಸಿದ್ದರು. ಭಾರತದ 2017ರ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದ ನಾಯರ್ ಧರ್ಮಶಾಲಾದಲ್ಲಿ ಆಸ್ಟ್ರೇಲಿಯ ವಿರುದ್ಧ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ನಾಯರ್ 2022ರಲ್ಲಿ ಕರ್ನಾಟಕದ ಪರ ಕೊನೆಯ ಪ್ರಥಮ ದರ್ಜೆ ಪಂದ್ಯ ಆಡಿದ್ದರು. 2021ರಿಂದ ದೇಶಿಯ ಕ್ರಿಕೆಟ್‌ನಲ್ಲಿ ಲಿಸ್ಟ್ ಎ ಕ್ರಿಕೆಟ್ ಆಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News