IPL : ಪಂದ್ಯದ ನಂತರ ರಿಂಕು ಸಿಂಗ್ ಕೆನ್ನೆಗೆ ಹೊಡೆದ ಕುಲದೀಪ್ ಯಾದವ್!

ರಿಂಕು ಸಿಂಗ್ ಮತ್ತು ಕುಲದೀಪ್ ಯಾದವ್ | PC : X
ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಬುಧವಾರ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ರಿಂಕು ಸಿಂಗ್ ಮತ್ತು ಕುಲದೀಪ್ ಯಾದವ್ ನಡುವೆ ಏನಾಯಿತು ಎಂಬುದರ ಕುರಿತು ಸ್ಪಷ್ಟನೆ ನೀಡಿದೆ.
ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ vs ಕೆಕೆಆರ್ ಪಂದ್ಯದ ನಂತರ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಕುಲದೀಪ್ ಯಾದವ್ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಎಲ್ಲಾ ವರದಿಗಳಿಗೆ ಉತ್ತರಿಸಲು ಕೆಕೆಆರ್ ಹಾಸ್ಯಮಯ ಶೀರ್ಷಿಕೆಯನ್ನು ಬಳಸಿದೆ.
ಡಿಸಿ ವಿರುದ್ಧ ಕೆಕೆಆರ್ 14 ರನ್‌ಗಳ ಜಯಗಳಿಸಿದ ನಂತರ ಭಾರತೀಯ ಕ್ರಿಕೆಟ್ ತಂಡದ ಸಹ ಆಟಗಾರರಾದ ಕುಲದೀಪ್ ಯಾದವ್ ಮತ್ತು ರಿಂಕು ಸಿಂಗ್ ನಡುವಿನ ಮಾತುಕತೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಿಚ್ಚು ಹಚ್ಚಿತ್ತು. ಪಂದ್ಯದ ನಂತರದ ಸಂವಾದದ ಸಮಯದಲ್ಲಿ ಕುಲದೀಪ್ ರಿಂಕುಗೆ ಎರಡು ಬಾರಿ ತಮಾಷೆಯಾಗಿ ಕೆನ್ನೆಗೆ ಹೊಡೆಯುವುದನ್ನು ತೋರಿಸುವ ವೈರಲ್ ವೀಡಿಯೊ ಅಭಿಮಾನಿಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗೆ ಕಾರಣವಾಯಿತು.
ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಡರೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಕುಲದೀಪ್ ಅವರ ಮೊದಲ ತಮಾಷೆಯ ಹೊಡೆತದ ನಂತರ ರಿಂಕು ಅವರು ನೀಡಿದ ಪ್ರತಿಕ್ರಿಯೆ ಇಬ್ಬರು ಕ್ರಿಕೆಟಿಗರ ನಡುವೆ ಏನೋ ಗಂಭೀರವಾಗಿದೆ ಎಂದು ಅಭಿಮಾನಿಗಳು ನಂಬುವಂತೆ ಮಾಡಿತು.
KKR ಕುಲದೀಪ್ ಮತ್ತು ರಿಂಕು ಅವರ ಹೊಸ ವಿಡಿಯೋವನ್ನು "ಮೀಡಿಯಾ vs ರಿಯಾಲಿಟಿ! ನಮ್ಮ ಪ್ರತಿಭಾನ್ವಿತ UP ಹುಡುಗರು ಈ ಸಾಧನೆ ಮಾಡಿದ್ದಾರೆ", ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ.
ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಕುಲದೀಪ್, ರಿಂಕು ಮತ್ತು ಇತರ ಕೆಲವು ಆಟಗಾರರು ಬೌಂಡರಿಯ ಬಳಿ ನಗುತ್ತಾ ಮಾತನಾಡುತ್ತಿರುವುದು ಕಂಡುಬರುತ್ತದೆ. ಇದ್ದಕ್ಕಿದ್ದಂತೆ, ಕುಲದೀಪ್ ರಿಂಕು ಕೆನ್ನೆಗೆ ಒಂದು ಸಣ್ಣ ಹೊಡೆತ ನೀಡುತ್ತಾರೆ. ಅದು ಆರಂಭದಲ್ಲಿ ತಮಾಷೆಯಂತೆ ಕಾಣುತ್ತದೆ. ಆಶ್ಚರ್ಯಚಕಿತನಾದ ರಿಂಕು ಸ್ವಲ್ಪ ಹೊತ್ತು ನಿಂತು ನೋಡುತ್ತಾರೆ. ಕುಲದೀಪ್ ಮತ್ತೆ ರಿಕು ಕೆನ್ನೆಗೆ ಹೊಡೆಯುತ್ತಾರೆ. ಎರಡನೇ ಹೊಡೆತವು ರಿಂಕು ಅವರ ಮುಖಭಾವದಲ್ಲಿ ಬದಲಾವಣೆ ತರುತ್ತದೆ. ಇದು ಉತ್ತರ ಪ್ರದೇಶದ ಇಬ್ಬರು ಕ್ರಿಕೆಟಿಗರ ನಡುವೆ ವೈಮನಸ್ಸು ಇದೆ ಎನ್ನುವ ಚರ್ಚೆ ಹುಟ್ಟು ಹಾಕಿತ್ತು.
ಈ ಇಬ್ಬರೂ ಕ್ರಿಕೆಟಿಗರು ತಮ್ಮ ದೇಶೀಯ ಕ್ರಿಕೆಟ್ ದಿನಗಳಿಂದ ಜೊತೆಯಾಗಿಯೇ ಇದ್ದವರು.
ವೀಡಿಯೊದಲ್ಲಿ ಆಡಿಯೋ ಇಲ್ಲದಿರುವುದರಿಂದ ಅದರ ಸಂದರ್ಭದ ಬಗ್ಗೆ ನಿಖರತೆ ಇಲ್ಲದಿರುವುದರಿಂದ, ರಿಂಕು ಅವರ ಪ್ರತಿಕ್ರಿಯೆಯು ಊಹಾಪೋಹಗಳಿಗೆ ಕಾರಣವಾಯಿತು. ಕೆಲವು ಅಭಿಮಾನಿಗಳು ಈ ಘಟನೆಯನ್ನು ಸ್ನೇಹಿತರ ನಡುವಿನ ಆಪ್ತ ಕ್ಷಣ ಎಂದು, ಅವರ ದೀರ್ಘಕಾಲದ ಸ್ನೇಹವನ್ನು ಉಲ್ಲೇಖಿಸಿದರು. ಹಲವರು ಕುಲದೀಪ್ ಅಗೌರವ ತೋರಿದ್ದಾರೆ ಎಂದು ಆರೋಪಿಸಿದರು.