ಕೆಕೆಆರ್-ಲಕ್ನೊ ಪಂದ್ಯ ಮುಂದೂಡಿ: ಸಿಎಬಿಗೆ ಕೋಲ್ಕತಾ ಪೊಲೀಸರ ಮನವಿ

PC | PTI
ಕೋಲ್ಕತಾ: ಈಡನ್‌ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಎ. 6ರಂದು ನಿಗದಿಯಾಗಿರುವ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ಹಾಗೂ ಲಕ್ನೊ ಸೂಪರ್ ಜಯಂಟ್ಸ್(ಎಲ್‌ಎಸ್‌ಜಿ)ತಂಡಗಳ ನಡುವಿನ ಪಂದ್ಯವನ್ನು ಮುಂದೂಡುವಂತೆ ಕೋಲ್ಕತಾ ಪೊಲೀಸರು ಬಂಗಾಳ ಕ್ರಿಕೆಟ್ ಸಂಸ್ಥೆಗೆ(ಸಿಎಬಿ)ತಿಳಿಸಿದ್ದಾರೆ. ಅದೇ ದಿನ ನಗರದಾದ್ಯಂತ ರಾಮನವಮಿ ಸಂಭ್ರಮಾಚರಣೆ ಇರುವುದರಿಂದ ಭದ್ರತೆ ದೃಷ್ಟಿಯಿಂದ ಪೊಲೀಸರು ಈ ಮನವಿ ಮಾಡಿದ್ದಾರೆ.
ರಾಮನವಮಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗುವುದು. ಎಪ್ರಿಲ್ 6ರಂದು ನಿಗದಿಯಾಗಿರುವ ಐಪಿಎಲ್ ಪಂದ್ಯವನ್ನು ಮರು ನಿಗದಿ ಮಾಡುವಂತೆ ಸಿಎಬಿಗೆ ಮನವಿ ಮಾಡಿ ಪತ್ರ ಬರೆದಿದ್ದೇವೆ. ನಮಗೆ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದ ಸಿಎಬಿ ಅಧ್ಯಕ್ಷ ಸ್ನೇಹಶೀಶ್ ಗಂಗುಲಿ,‘‘ನಿಗದಿಯಂತೆ ಪಂದ್ಯನಡೆಸಲು ಅಧಿಕಾರಿಗಳಿಂದ ಅನುಮತಿ ದೊರೆತಿಲ್ಲ. ಸಾಕಷ್ಟು ಭದ್ರತಾ ಸಿಬ್ಬಂದಿ ನಿಯೋಜಿಸಲು ಸಾಧ್ಯವಾಗದು ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ. ಪೊಲೀಸರ ಭದ್ರತೆ ಇಲ್ಲದಿದ್ದರೆ, 65,000 ಪ್ರೇಕ್ಷಕರ ನಿರ್ವಹಣೆ, ರಕ್ಷಣೆ ಅಸಾಧ್ಯ. ಈ ಕುರಿತು ಬಿಸಿಸಿಐಗೆ ಮಾಹಿತಿ ನೀಡಲಾಗಿದೆ’’ಎಂದು ಹೇಳಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲೂ ಇದೇ ಕಾರಣಕ್ಕೆ ಕೋಲ್ಕತಾ-ರಾಜಸ್ಥಾನ ರಾಯಲ್ಸ್ ಪಂದ್ಯವು ಮರು ನಿಗದಿಯಾಗಿತ್ತು.