ನನ್ನ ಆಯ್ಕೆ ಅನ್ವೇಷಿಸಲು ಬಯಸುವೆ : ಕೆ.ಎಲ್.ರಾಹುಲ್

Update: 2024-11-11 16:56 GMT

ಕೆ.ಎಲ್.ರಾಹುಲ್ | PC : PTI 

ಹೊಸದಿಲ್ಲಿ : ಲಕ್ನೊ ಸೂಪರ್ ಜಯಂಟ್ಸ್ನಿಂದ ತನ್ನ ನಿರ್ಗಮನ ಕುರಿತಂತೆ ಕೊನೆಗೂ ತನ್ನ ಮೌನವನ್ನು ಮುರಿದಿರುವ ಕೆ.ಎಲ್.ರಾಹುಲ್, ಹೊಸ ಆಯ್ಕೆಗಳನ್ನು ಅನ್ವೇಷಿಸಲು, ಸ್ವತಂತ್ರವಾಗಿ ಆಡಲು ಸಾಧ್ಯವಿರುವ ತಂಡಗಳತ್ತ ಎದುರು ನೊಡುತ್ತಿರುವೆ ಎಂದು ಹೇಳಿದ್ದಾರೆ.

ರಾಹುಲ್ ಅವರು ಲಕ್ನೊ ತಂಡದಿಂದ ನಿರ್ಗಮಿಸಿರುವ ಸಂದರ್ಭದ ಕುರಿತಂತೆ ಕ್ರಿಕೆಟ್ ವಲಯದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿತೋ ಅಥವಾ ಅದು ಅವರ ವೈಯಕ್ತಿಕ ಆಯ್ಕೆಯೋ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಹುಲ್, ವಿವಿಧ ಫ್ರಾಂಚೈಸಿಗಳಲ್ಲಿ ಅವಕಾಶಗಳಿಗಾಗಿ ಹುಡುಕಾಡಲು ಬಯಸಿದ್ದೇನೆ ಎಂದಿದ್ದಾರೆ.

ನಾನು ಹೊಸತಾಗಿ ಆರಂಭಿಸಲು ಬಯಸುವೆ. ನನ್ನ ಆಯ್ಕೆಗಳಿಗಾಗಿ ಶೋಧಿಸಲು ಇಷ್ಟಪಡುವೆ. ನನಗೆ ಎಲ್ಲಿ ಸ್ವಲ್ಪ ಸ್ವಾತಂತ್ರ್ಯವಿರುತ್ತದೆಯೋ ಅಲ್ಲಿಗೆ ಹೋಗುವೆ. ಕೆಲವೊಮ್ಮೆ ನೀವು ದೂರ ಹೋಗಬೇಕು ಹಾಗೂ ಒಳ್ಳೆಯದನ್ನು ಕಂಡುಕೊಳ್ಳಬೇಕು. ನಾನು ಸ್ವಲ್ಪ ಸಮಯ ತನಕ ಟಿ20 ತಂಡದಿಂದ ಹೊರಗುಳಿದಿದ್ದೆ ಎಂದು ಸ್ಟಾರ್ ಸ್ಪೋರ್ಟ್ಸ್ಗೆ ರಾಹುಲ್ ತಿಳಿಸಿದ್ದಾರೆ.

ಭಾರತದ ಟಿ20 ತಂಡದಿಂದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಹೊರಗುಳಿದಿರುವ ರಾಹುಲ್, ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಮರಳಲು ಮುಂಬರುವ ಐಪಿಎಲ್ ಋತುವನ್ನು ಎದುರು ನೋಡುತ್ತಿದ್ದಾರೆ. ಟೀಮ್ ಇಂಡಿಯಾಕ್ಕೆ ಮರಳಲು ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದು ರಾಹುಲ್ ಇದೇ ವೇಳೆ ಹೇಳಿದ್ದಾರೆ.

ಐಪಿಎಲ್ 2024ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ತಂಡ ಸೋತಾಗ ಲಕ್ನೊ ತಂಡದ ಮಾಲಕ ಸಂಜೀವ್ ಗೊಯೆಂಕಾ ಅವರ ಪ್ರತಿಕ್ರಿಯೆಯು ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣದಲ್ಲಿ ಉದ್ವಿಗ್ನತೆ ಸೃಷ್ಟಿಸಿತ್ತು.

ರಾಹುಲ್ ಅವರು ಸತತ ಮೂರು ವರ್ಷಗಳ ಕಾಲ ಲಕ್ನೊ ತಂಡದ ನಾಯಕನಾಗಿದ್ದರು. ಲಕ್ನೊ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ರಾಹುಲ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ರಾಹುಲ್ ಅವರು ಸೌದಿ ಅರೇಬಿಯದ ಜಿದ್ದಾದಲ್ಲಿ ನ.24 ಹಾಗೂ 25ರಂದು ನಡೆಯುವ ಮೆಗಾ ಐಪಿಎಲ್ ಹರಾಜಿನಲ್ಲಿ ರಾಹುಲ್ ಲಭ್ಯರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News