ಮತ್ತೆ ಫಿಟ್ನೆಸ್ ಪಡೆಯುವ ಹಾದಿಯಲ್ಲಿ ಕೆ.ಎಲ್.ರಾಹುಲ್
ಮುಂಬೈ: ಕಳೆದ ವರ್ಷ ಸರ್ಜರಿಗೆ ಕಾರಣವಾಗಿದ್ದ ಗಾಯದಿಂದ ಬಳಲುತ್ತಿರುವ ಭಾರತದ ಹಿರಿಯ ಬ್ಯಾಟರ್ ಕೆ.ಎಲ್.ರಾಹುಲ್ ಇಂಗ್ಲೆಂಡ್ ವಿರುದ್ಧದ ಹಿಂದಿನ ಮೂರು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಿದ್ದರು. ಮಾರ್ಚ್ 22ರಂದು ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಫಿಟ್ ಆಗುವ ಹಾದಿಯಲ್ಲಿದ್ದಾರೆ.
ರಾಹುಲ್ ಲಕ್ನೊ ಸೂಪರ್ಜಯಂಟ್ಸ್ ತಂಡದ ನಾಯಕನಾಗಿದ್ದಾರೆ. ಮಾರ್ಚ್ 24ರಂದು ಜೈಪುರದಲ್ಲಿ ನಡೆಯುವ ರಾಜಸ್ಥಾನ ರಾಯಲ್ಸ್ ವಿರುದ್ಧ ತನ್ನ ತಂಡದ ಮೊದಲ ಪಂದ್ಯವನ್ನಾಡುವ ಸಾಧ್ಯತೆಯಿದೆ.
ಬಲ ತೊಡೆ ಭಾಗದ ನೋವಿನಿಂದ ಬಳಲುತ್ತಿರುವ ರಾಹುಲ್ ತಮ್ಮ ಗಾಯದ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲು ಲಂಡನ್ ಗೆ ಪ್ರಯಾಣಿಸಿದ್ದರು.
ರಾಹುಲ್ ಅವರು ಲಂಡನ್ ನಲ್ಲಿ ಉನ್ನತ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿದ್ದರು. ಅವರು ರವಿವಾರ ಭಾರತಕ್ಕೆ ವಾಪಸಾಗಿದ್ದಾರೆ. ಬೆಂಗಳೂರಿನಲ್ಲಿರುವ ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎನ್ ಸಿ ಎ ಯಿಂದ ಶೀಘ್ರವೇ ರಿಟರ್ನ್ ಟು ಪ್ಲೇ ಸಟಿಫಿಕೇಟ್ ಪಡೆಯಲಿದ್ದಾರೆ. ಅವರು ಐಪಿಎಲ್ ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ. ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಕೀಪರ್-ಬ್ಯಾಟರ್ ಆಗಿ ಕಾಣಿಸಿಕೊಳ್ಳಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.