ಐದನೇ ಟೆಸ್ಟ್ ಪಂದ್ಯಕ್ಕೂ ಕೆ.ಎಲ್.ರಾಹುಲ್ ಅಲಭ್ಯ?
ಹೊಸದಿಲ್ಲಿ: ಗಾಯದ ಸಮಸ್ಯೆಯಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಭಾರತದ ಹಿರಿಯ ಬ್ಯಾಟರ್ ಕೆ.ಎಲ್.ರಾಹುಲ್ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.
ಜನವರಿಯಲ್ಲಿ ಹೈದರಾಬಾದ್ ನಲ್ಲಿ ನಡೆದ ಸರಣಿಯ ಆರಂಭಿಕ ಟೆಸ್ಟ್ ಪಂದ್ಯದ ನಂತರ ರಾಹುಲ್ ಆಡುವ 11ರ ಬಳಗದಿಂದ ದೂರ ಉಳಿದಿದ್ದಾರೆ. ರಾಜ್ಕೋಟ್ ನಲ್ಲಿ ನಡೆದಿರುವ ಮೂರನೇ ಟೆಸ್ಟ್ಗಿಂತ ಮೊದಲು ರಾಹುಲ್ ಶೇ.90ರಷ್ಟು ಫಿಟ್ ಇದ್ದಾರೆ ಎಂದು ಬಿಸಿಸಿಐ ಘೋಷಿಸಿದ್ದರೂ ಅವರು ಈಗಲೂ ತಂಡಕ್ಕೆ ಲಭ್ಯವಿಲ್ಲ.
ತನ್ನ ಗಾಯಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ರಾಹುಲ್ ಲಂಡನ್ ಗೆ ಪ್ರಯಾಣಿಸುವ ಸಾಧ್ಯತೆಯಿದೆ.
ಭಾರತವು ಈಗಾಗಲೇ ಸರಣಿ ಗೆದ್ದುಕೊಂಡಿದ್ದು ಮಾರ್ಚ್ 7ರಂದು ಧರ್ಮಶಾಲಾದಲ್ಲಿ ಆರಂಭವಾಗಲಿರುವ 5ನೇ ಟೆಸ್ಟ್ ನಲ್ಲಿ ರಾಹುಲ್ ಭಾಗವಹಿಸುವ ರಿಸ್ಕ್ ತಪ್ಪಿಸಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ರಾಹುಲ್ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಪ್ರಮುಖ ಆಟಗಾರನಾಗಿದ್ದಾರೆ. ಮುಂಬರುವ ಐಪಿಎಲ್ ನಲ್ಲಿ ಲಕ್ನೊ ಸೂಪರ್ ಜಯಂಟ್ಸ್ ನಾಯಕತ್ವದ ಹೊಣೆ ಹೊರಲಿರುವ ರಾಹುಲ್ ಟಿ20 ವಿಶ್ವಕಪ್ ನಲ್ಲೂ ಆಯ್ಕೆಯಾಗುವ ಸಾಧ್ಯತೆ ಅಧಿಕವಿದೆ. ಹೀಗಾಗಿ ಅವರು ಚೇತರಿಸಿಕೊಳ್ಳಲು ಹೆಚ್ಚು ಸಮಯ ನೀಡಲು ನಿರ್ಧರಿಸಲಾಗಿದೆ.
ಲಂಡನ್ ಗೆ ಪ್ರಯಾಣಿಸಲು ತಜ್ಞರ ಅಭಿಪ್ರಾಯವನ್ನು ಪಡೆಯುವ ಅಗತ್ಯ ಹೆಚ್ಚಾಗಿದೆ. ಬ್ಯಾಟಿಂಗ್ ಮಾಡುವಾಗ ಅವರು ಸ್ವಲ್ಪ ನೋವು ಅನುಭವಿಸಿದ್ದಾರೆ. ಅವರು ತಂಡಕ್ಕೆ ದೀರ್ಘಾವಧಿ ಅಗತ್ಯವಿರುವ ಆಟಗಾರನಾಗಿರುವುದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಐಪಿಎಲ್ ಮೂಲಗಳು ಪಿಟಿಐಗೆ ತಿಳಿಸಿವೆ.
ಮುಂದಿನ ದಿನಗಳಲ್ಲಿ ಐಪಿಎಲ್ ಹಾಗೂ ಟಿ20 ವಿಶ್ವಕಪ್ ಸಹಿತ ಸಾಕಷ್ಟು ಸ್ಪರ್ಧಾವಳಿ ನಡೆಯಲಿದೆ..ಈ ವರ್ಷ ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧ ಪ್ರಮುಖ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಅವಸರಪಡುವುದಕ್ಕಿಂತ ಅವರು ಸರಿಯಾಗಿ ಚೇತರಿಸಿಕೊಳ್ಳಲು ಸಮಯ ನೀಡುವುದು ಉತ್ತಮ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರಾಹುಲ್ ಶತಕ ಗಳಿಸಿರುವ ಏಕೈಕ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಅವರು ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.
ರಾಹುಲ್ ಅನುಪಸ್ಥಿತಿಯಲ್ಲಿ ರಜತ್ ಪಾಟಿದಾರ್ ತಂಡದಲ್ಲಿದ್ದಾರೆ. ಆರು ಇನಿಂಗ್ಸ್ ಗಳಲ್ಲಿ ಕೇವಲ 63 ಗಳಿಸಿರುವ ಪಾಟಿದಾರ್ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಧರ್ಮಶಾಲಾ ಟೆಸ್ಟ್ ನಲ್ಲಿ ಪಾಟಿದಾರ್ ಬದಲಿಗೆ ದೇವದತ್ತ ಪಡಿಕ್ಕಲ್ ಅವಕಾಶ ಪಡೆಯಲಿದ್ದಾರೆ ಎಂಬ ಊಹಾಪೋಹವಿದೆ.
ರಾಂಚಿ ಟೆಸ್ಟ್ನಿಂದ ವಿಶ್ರಾಂತಿ ಪಡೆದಿದ್ದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಧರ್ಮಶಾಲಾದಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ಸಾಧ್ಯತೆಯಿದೆ. ಪ್ರತಿ ಟೆಸ್ಟ್ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪಾಯಿಂಟ್ಸ್ ನೀಡಲಿದೆ. ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಭಾರತವು ಸದ್ಯ ನ್ಯೂಝಿಲ್ಯಾಂಡ್ ನಂತರ ಎರಡನೇ ಸ್ಥಾನದಲ್ಲಿದೆ.