ಇತಿಹಾಸ ಸೃಷ್ಟಿಸಿದ ಲೆಮೈನ್ ಯಮಲ್: ಯೂರೊ ಫೈನಲ್ ಗೆ ಸ್ಪೇನ್
ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಅಮೋಘ ಪ್ರದರ್ಶನ ನೀಡಿದ ಸ್ಪೇನ್ ತಂಡ ಯುಇಎಫ್ಎ ಯೂರೊ-2024 ಪಂದ್ಯಾವಳಿಯಲ್ಲಿ ಮಂಗಳವಾರ ಫ್ರಾನ್ಸ್ ವಿರುದ್ಧ 2-1 ಅಂತರದ ಜಯ ಸಾಧಿಸಿ ಫೈನಲ್ ಗೆ ಮುನ್ನಡೆದಿದೆ. ಇದು ಕಳೆದ 12 ವರ್ಷಗಳಲ್ಲಿ ಪ್ರಮುಖ ಟೂರ್ನಿಗಳ ಪೈಕಿ ಸ್ಪೇನ್ ತಂಡದ ಮೊಟ್ಟಮೊದಲ ಫೈನಲ್ ಆಗಿದೆ. ಮತ್ತೊಂದು ಸೆಮಿಫೈನಲ್ ನಲ್ಲಿ ಸೆಣೆಸುತ್ತಿರುವ ನೆದರ್ಲೆಂಡ್ಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಸ್ಪೇನ್ ಫೈನಲ್ ನಲ್ಲಿ ಎದುರಿಸಲಿದೆ.
ಫ್ರಾನ್ಸ್ ಪರ ರಾಂಡಲ್ ಕೊಲೊ ಮುವಾನಿ ಗೋಲು ಗಳಿಸಿ ಆರಂಭಿಕ ಮುನ್ನಡೆ ಗಳಿಸಿಕೊಟ್ಟರು. ಆದರೆ ಲೆಮೈನ್ ಯಮಲ್ ಅದ್ಭುತ ಗೋಲಿನೊಂದಿಗೆ ಸ್ಪೇನ್ ತಂಡ ಸಮಬಲ ಸಾಧಿಸಲು ನೆರವಾದರು. ಜತೆಗೆ ಯೂರೊ ಟೂರ್ನಿಯಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ದನಿ ಓಲ್ಮೊ 25ನೇ ನಿಮಿಷದಲ್ಲಿ ಗಳಿಸಿದ ಮತ್ತೊಂದು ಗೋಲು ತಂಡವನ್ನು ಜಯದ ದಡ ಸೇರಿಸಿತು.
ಕೇವಲ ಹದಿನಾರು ವರ್ಷ ವಯಸ್ಸಿನ ಯಮಲ್, ಅದ್ಭುತ ಕೌಶಲ ಪ್ರದರ್ಶಿಸಿ ಗೋಲು ಗಳಿಸುವ ಮೂಲಕ ಯೂರೊ ಇತಿಹಾಸದಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದರು. ಬಾಕ್ಸ್ ಹೊರಗಿನಿಂದ ಲಾಂಗ್ ರೇಂಜರ್ ಪ್ರಯತ್ನದಲ್ಲಿ ಪರಿಪೂರ್ಣ ಯಶ ಸಾಧಿಸಿದ ಅವರು, ಟಾಪ್ ಕಾರ್ನರ್ ಮೂಲಕ ಚೆಂಡನ್ನು ಗುರಿ ತಲುಪಿಸಿ ಇತಿಹಾಸ ಸೃಷ್ಟಿಸಿದರು.
16 ವರ್ಷ 362 ದಿನ ಪ್ರಾಯದ ಯಮಲ್ 25 ಮೀಟರ್ ಅಂತರದಿಂದ ಗೋಲು ಹೊಡೆದು, ಸ್ವಿಡ್ಜರ್ಲೆಂಡ್ನ ಜೊಹಾನ್ ವೊನ್ಲಾಂಥೆನ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಸ್ವಿಸ್ ಆಟಗಾರ ಈ ಮೊದಲು 18 ವರ್ಷ 141 ದಿನಗಳ ಪ್ರಾಯದಲ್ಲಿ 2004ರಲ್ಲಿ ಗೋಲು ಗಳಿಸಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದರು.