ಟಿ20 ವಿಶ್ವಕಪ್ ಗೆಲುವಿನ ಹಾದಿಯಲ್ಲಿ ಭಾರತದ ದಾಖಲೆಗಳು ಹಲವು

Update: 2024-06-30 15:50 GMT

Photo : x/BCCI

ಹೊಸದಿಲ್ಲಿ : ಬಾರ್ಬಡೋಸ್ನಲ್ಲಿ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಜಯಿಸಿರುವ ಭಾರತವು 17 ವರ್ಷಗಳ ಪ್ರಶಸ್ತಿಯ ಬರ ನೀಗಿಸಿಕೊಂಡಿದೆ. 2007ರಲ್ಲಿ ಮೊದಲ ಆವೃತ್ತಿಯ ಟಿ20 ವಿಶ್ವಕಪ್ಪನ್ನು ಭಾರತ ಗೆದ್ದಿತ್ತು.

ಮೊದಲ ಬಾರಿ ಫೈನಲ್ನಲ್ಲಿ ಕಾಣಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ 7 ರನ್ ಸೋಲನುಭವಿಸಿ 2ನೇ ಸ್ಥಾನ ಪಡೆದಿದೆ.

ಭಾರತದ ಕ್ರಿಕೆಟ್ ತಂಡ ಕೆಲವು ವರ್ಷಗಳಿಂದ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತಾ ಬಂದಿದೆ. ಫೈನಲ್ ಹಂತದಲ್ಲಿ ಎಡವಿದ್ದ ಭಾರತವು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆದರೆ ಈ ಗೆಲುವು ವಿಶೇಷ ಮಹತ್ವ ಪಡೆದಿದ್ದು, ಈಗಿನ ತಂಡವು ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದೆ. ಮೈದಾನದಲ್ಲಿ ಪ್ರಾಬಲ್ಯ ಮೆರೆದಿರುವ ಭಾರತವು ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ.

ಟಿ20 ವಿಶ್ವಕಪ್ ಅಭಿಯಾನದಲ್ಲಿ ಭಾರತ ಸಾಧಿಸಿರುವ ಹಲವು ಪ್ರಮುಖ ದಾಖಲೆಗಳು ಇಂತಿವೆ.

*ಭಾರತವು ಪ್ರತಿಷ್ಠಿತ ಟೂರ್ನಮೆಂಟ್‌ ನಲ್ಲಿ ಎರಡನೇ ಬಾರಿ ಪ್ರಶಸ್ತಿ ಜಯಿಸಿ ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳ ದಾಖಲೆಯನ್ನು ಸರಿಗಟ್ಟಿದೆ.

*ಟಿ20 ವಿಶ್ವಕಪ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟರ್ ಎಂಬ ಸ್ಥಾನವನ್ನು ಕೊಹ್ಲಿ ಗಟ್ಟಿಪಡಿಸಿಕೊಂಡಿದ್ದಾರೆ. ಈ ವರ್ಷದ ಪಂದ್ಯಾವಳಿಯನ್ನು ಭಾರತವು ಗೆಲ್ಲುವ ಮೂಲಕ ಕೊಹ್ಲಿ ಅವರು ವಿಶ್ವ ಕ್ರಿಕೆಟ್‌ ನಲ್ಲಿ ಅನನ್ಯ ಸಾಧನೆ ಮಾಡಿದರು. ಕೊಹ್ಲಿ ಅವರು ಅಂಡರ್-19 ವಿಶ್ವಕಪ್(2008), ಏಕದಿನ ವಿಶ್ವಕಪ್(2011), ಚಾಂಪಿಯನ್ಸ್ ಟ್ರೋಫಿ(2013) ಹಾಗೂ ಟಿ20 ವಿಶ್ವಕಪ್(2024)ಗೆದ್ದುಕೊಂಡಿರುವ ಏಕೈಕ ಆಟಗಾರನಾಗಿದ್ದಾರೆ.

*ಭಾರತದ ನಾಯಕ ರೋಹಿತ್ ಶರ್ಮಾ ಐಸಿಸಿ ಪುರುಷರ ಟಿ20 ವಿಶ್ವಕಪ್‌ ನ ಎಲ್ಲ 9 ಆವೃತ್ತಿಗಳಲ್ಲಿ ಭಾಗವಹಿಸಿ ಅಪೂರ್ವ ಸಾಧನೆ ಮಾಡಿದರು. ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್ ನಂತರ ಈ ಸಾಧನೆ ಮಾಡಿದ 2ನೇ ಆಟಗಾರನಾಗಿದ್ದಾರೆ. ರೋಹಿತ್ ಅವರು ಆಟಗಾರ ಹಾಗೂ ನಾಯಕನಾಗಿ ಟ್ರೋಫಿ ಜಯಿಸಿದ ಮೊದಲ ಆಟಗಾರನಾಗಿದ್ದಾರೆ.

*ಟಿ20 ಮಾದರಿ ಕ್ರಿಕೆಟ್‌ ನಲ್ಲಿ ರೋಹಿತ್ ನಾಯಕತ್ವ ಕೌಶಲ್ಯ ಅತ್ಯುತ್ತಮವಾಗಿದ್ದು, ಟಿ20 ಅಂತರ್ರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 50 ಪಂದ್ಯಗಳಲ್ಲಿ ಜಯ ಸಾಧಿಸಿರುವ ಮೊದಲ ನಾಯಕನಾಗಿದ್ದಾರೆ.

*ಜಸ್ಪ್ರಿತ್ ಬುಮ್ರಾ ಟಿ20 ವಿಶ್ವಕಪ್‌ ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಬೌಲರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಟೂರ್ನಿಯುದ್ದಕ್ಕೂ ತನ್ನ ಕೌಶಲ್ಯಹಾಗೂ ಸ್ಥಿರತೆ ಪ್ರದರ್ಶಿಸಿದ್ದ ಬುಮ್ರಾ 4.17ರ ಎಕಾನಮಿ ರೇಟ್ ಕಾಯ್ದುಕೊಂಡಿದ್ದರು.

*ಭಾರತವು ಇಡೀ ಟೂರ್ನಮೆಂಟ್‌ ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡ ಮೊದಲ ತಂಡವಾಗಿದೆ. ಶ್ರೀಲಂಕಾ(2009), ಆಸ್ಟ್ರೇಲಿಯ(2010), ಭಾರತ(2014) ಹಾಗೂ ದಕ್ಷಿಣ ಆಫ್ರಿಕಾ(2024) ಫೈನಲ್ ಪಂದ್ಯದಲ್ಲಿ ಸೋಲುವ ತನಕ ಟೂರ್ನಮೆಂಟ್‌ ನಲ್ಲಿ ಅಜೇಯವಾಗಿದ್ದವು. ಭಾರತವು ಒಂದೇ ಆವೃತ್ತಿಯಲ್ಲಿ ಗರಿಷ್ಠ ಪಂದ್ಯಗಳನ್ನು (8)ಜಯಿಸಿ ನೂತನ ದಾಖಲೆ ನಿರ್ಮಿಸಿದೆ.

*ಅರ್ಷದೀಪ್ ಸಿಂಗ್ ಟಿ20 ಕ್ರಿಕೆಟ್‌ ನಲ್ಲಿ ಭಾರತೀಯ ಕ್ರಿಕೆಟ್ ತಂಡ ತನ್ನ ಮೇಲಿಟ್ಟಿರುವ ನಂಬಿಕೆಗೆ ನ್ಯಾಯ ಒದಗಿಸಿದ್ದಾರೆ. ಯುವ ಎಡಗೈ ವೇಗದ ಬೌಲರ್ ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ ಗಳನ್ನು ಉರುಳಿಸಿ ಅಫ್ಘಾನಿಸ್ತಾನದ ಫಝಲ್ಹಕ್ ಫಾರೂಕಿ ದಾಖಲೆ(17ವಿಕೆಟ್)ಸರಿಗಟ್ಟಿದರು. 2021ರ ಟೂರ್ನಿಯಲ್ಲಿ 16 ವಿಕೆಟ್‌ ಗಳನ್ನು ಪಡೆದಿದ್ದ ಶ್ರೀಲಂಕಾದ ವನಿಂದು ಹಸರಂಗ ದಾಖಲೆಯನ್ನು ಸಿಂಗ್ ಹಾಗೂ ಫಾರೂಕಿ ಮುರಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News