ಲಕ್ನೊ ತಂಡವನ್ನು ಸೇರಿದ ಮಯಾಂಕ್ ಯಾದವ್; ರಾಜಸ್ಥಾನ ವಿರುದ್ಧ ಪಂದ್ಯಕ್ಕಿಂತ ಮೊದಲು ಫಿಟ್ನೆಸ್ ಪರೀಕ್ಷೆ

Update: 2025-04-16 20:29 IST
Mayank Yadav

ಮಯಾಂಕ್ ಯಾದವ್ |  PC : ipl.com

  • whatsapp icon

ಹೊಸದಿಲ್ಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ)ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ನಂತರ ವೇಗದ ಬೌಲರ್ ಮಯಾಂಕ್ ಯಾದವ್ ಮಂಗಳವಾರ ರಾತ್ರಿ ಲಕ್ನೊ ಸೂಪರ್ ಜಯಂಟ್ಸ್ ತಂಡವನ್ನು ಸೇರ್ಪಡೆಯಾದರು.

ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ(ಐಪಿಎಲ್)ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಮುಂದಿನ ಪಂದ್ಯಕ್ಕಿಂತ ಮೊದಲು ಯುವ ಆಟಗಾರ ಮಯಾಂಕ್ ಕೆಲವು ಫಿಟ್ನೆಸ್ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ.

ಮಯಾಂಕ್ 2024ರ ಅಕ್ಟೋಬರ್‌ ನಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯ ಆಡಿದ್ದು, ಆಗ ಅವರು ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20 ಪಂದ್ಯದಲ್ಲಿ ಸ್ಥಾನ ಪಡೆದಿದ್ದರು.

ಆ ನಂತರ ಬೆನ್ನುನೋವಿನ ಕಾರಣಕ್ಕೆ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಕಾಲ್ಬೆರಳಿನ ಗಾಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅವರ ಪುನರಾರಂಭ ಮತ್ತಷ್ಟು ತಡವಾಗಿದೆ.

ಬಿಸಿಸಿಐ ವೈದ್ಯಕೀಯ ತಂಡದಿಂದ ಸಂಪೂರ್ಣ ಅನುಮತಿ ಪಡೆದಿರುವ 22ರ ಹರೆಯದ ಮಯಾಂಕ್‌ ರನ್ನು ಲಕ್ನೊ ತಂಡದ ಫಿಸಿಯೋ ಆಶೀಶ್ ಕೌಶಿಕ್ ಸಮಗ್ರವಾಗಿ ತಪಾಸಣೆ ಮಾಡಿದ್ದಾರೆ.

ಎರಡು ವರ್ಷಗಳಲ್ಲಿ ಐದು ಬಾರಿ ಗಾಯದ ಸಮಸ್ಯೆಗಳಿಗೆ ಒಳಗಾಗಿರುವ ಮಯಾಂಕ್ ಕುರಿತಂತೆ ಲಕ್ನೊ ಪಾಳಯವು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

2024ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಯಾಂಕ್ ಕೇವಲ 4 ಪಂದ್ಯಗಳನ್ನು ಆಡಿದ್ದು, ಗಾಯದ ಸಮಸ್ಯೆಯ ಕಾರಣಕ್ಕೆ ಆ ವರ್ಷದ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದರು.

ಈ ವರ್ಷದ ಐಪಿಎಲ್ ಟೂರ್ನಿಯ ಆರಂಭವಾಗುವ ಮೊದಲೇ ಲಕ್ನೊ ತಂಡವು ಸಾಕಷ್ಟು ಗಾಯದ ಸಮಸ್ಯೆಗಳನ್ನು ಎದುರಿಸಿತ್ತು. ಗಾಯದ ಸಮಸ್ಯೆಯಿಂದಾಗಿಯೇ ಆಕಾಶ್ ದೀಪ್ ಹಾಗೂ ಅವೇಶ್ ಖಾನ್ ತಂಡವನ್ನು ತಡವಾಗಿ ಸೇರಿದ್ದರು. ಮುಹ್ಸಿನ್ ಖಾನ್ ಈ ವರ್ಷದ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಬೇರೆ ಆಯ್ಕೆ ಇಲ್ಲದೆ ರಿಷಭ್ ಪಂತ್ ನೇತೃತ್ವದ ಲಕ್ನೊ ತಂಡವು ಶಾರ್ದುಲ್ ಠಾಕೂರ್‌ರನ್ನು ಬದಲಿ ಬೌಲರ್ ಆಗಿ ಆಯ್ಕೆ ಮಾಡಿತ್ತು.

ಈ ವರ್ಷ ಶಾರ್ದುಲ್ ಅವರು ಲಕ್ನೊದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಮಯಾಂಕ್ ಉಪಸ್ಥಿತಿಯು ಖಂಡಿತವಾಗಿಯೂ ತಂಡದ ವೇಗದ ಬೌಲಿಂಗ್ ದಾಳಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. 7 ಪಂದ್ಯಗಳಲ್ಲಿ 4ರಲ್ಲಿ ಜಯ ದಾಖಲಿಸಿರುವ ಲಕ್ನೊ ತಂಡವು ಅಂಕಪಟ್ಟಿಯಲ್ಲಿ ಇದೀಗ 5ನೇ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News