ಗುಜರಾತ್ ವಿರುದ್ಧ ಪಂದ್ಯದಲ್ಲಿ ಮಯಾಂಕ್ ಯಾದವ್ ಗೆ ಕಾಡಿದ ಗಾಯದ ಸಮಸ್ಯೆ
ಲಕ್ನೊ: ಲಕ್ನೊ ಸೂಪರ್ ಜಯಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಗೆ ರವಿವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ.
ಲಕ್ನೊದ ಎಕಾನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುಜರಾತ್ ವಿರುದ್ಧ ಒಂದು ಓವರ್ ಬೌಲಿಂಗ್ ಮಾಡಿದ ನಂತರ ಯಾದವ್ ಗೆ ಪಕ್ಕೆ ಸೆಳೆತ ಕಾಣಿಸಿಕೊಂಡಿದ್ದು, ಫಿಸಿಯೊ ಜೊತೆಗೆ ಮೈದಾನದಿಂದ ಹೊರ ನಡೆದರು.
ಮಯಾಂಕ್ ಗೆ ಪಕ್ಕೆ ಸೆಳೆತ ಕಾಣಿಸಿಕೊಳ್ಳುವ ಮೊದಲು ತಾನೆಸೆದ ಒಂದೇ ಓವರ್ ನಲ್ಲಿ 13 ರನ್ ನೀಡಿದ್ದರು.
ದಿಲ್ಲಿಯ ವೇಗದ ಬೌಲರ್ ಮಯಾಂಕ್ ಯಾದವ್ ಈ ವರ್ಷದ ಐಪಿಎಲ್ ನಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ಈ ತನಕ ಅವರು ಎರಡು ಪಂದ್ಯಗಳನ್ನು ಆಡಿದ್ದು ಒಟ್ಟು 6 ವಿಕೆಟ್ ಗಳನ್ನು ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ಧರಿಸುವ ಸ್ಪರ್ಧೆಯಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ತಾನಾಡಿದ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಗಂಟೆಗೆ 155.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಮಯಾಂಕ್ ಎಲ್ಲರ ಗಮನ ತನ್ನತ್ತ ಸೆಳೆದಿದ್ದರು. ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮುಂದಿನ ಪಂದ್ಯದಲ್ಲಿ ಗಂಟೆಗೆ 156.7 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು.