ಪಿಸಿಬಿ ಆಯ್ಕೆಗಾರ ಹುದ್ದೆಗೆ ಮುಹಮ್ಮದ್ ಯೂಸುಫ್ ರಾಜೀನಾಮೆ

Update: 2024-09-29 15:35 GMT

ಮುಹಮ್ಮದ್ ಯೂಸುಫ್ | PC : X 

ಕರಾಚಿ : ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ತಂಡದ ಆಯ್ಕೆಗೆ ಸಂಬಂಧಿಸಿ ಟೀಕೆ ವ್ಯಕ್ತವಾದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಆಯ್ಕೆಗಾರ ಹುದ್ದೆಗೆ ಮುಹಮ್ಮದ್ ಯೂಸುಫ್ ರವಿವಾರ ರಾಜೀನಾಮೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಬ್ಯಾಟರ್ ಯೂಸುಫ್, ವೈಯಕ್ತಿಕ ಕಾರಣಗಳಿಂದಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆಗಾರನ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಈ ಅದ್ಭುತ ತಂಡಕ್ಕೆ ಸೇವೆ ಸಲ್ಲಿಸುವುದು ಮಹಾ ಗೌರವ. ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆ ಹಾಗೂ ಯಶಸ್ಸಿಗೆ ಕೊಡುಗೆ ನೀಡಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಬರೆದಿದ್ದಾರೆ.

2024ರ ಮಾರ್ಚ್‌ನಲ್ಲಿ ಯೂಸುಫ್ ಅವರು ಪಿಸಿಬಿಯ ಆಯ್ಕೆಗಾರನಾಗಿ ನೇಮಕಗೊಂಡಿದ್ದರು. ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ತನ್ನ ಹುದ್ದೆ ಉಳಿಸಿಕೊಂಡಿದ್ದರು. ಪಾಕ್ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಸೋತು ನಿರ್ಗಮಿಸಿತ್ತು.

ಪಾಕಿಸ್ತಾನ ತಂಡ ಆ ನಂತರ ಶಾನ್ ಮಸೂದ್ ನಾಯಕತ್ವದಲ್ಲಿ ಸ್ವದೇಶದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿತ್ತ್ತು.

ಇಂಗ್ಲೆಂಡ್ ವಿರುದ್ಧ ಅಕ್ಟೋಬರ್ 7ರಿಂದ ಮುಲ್ತಾನ್‌ನಲ್ಲಿ ಪಾಕಿಸ್ತಾನ ತಂಡವು ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದ ವಿಚಾರಕ್ಕೆ ಸಂಬಂಧಿಸಿ ಯೂಸುಫ್ ಟೀಕೆಗೆ ಒಳಗಾಗಿದ್ದರು. ದೇಶೀಯ ಕ್ರಿಕೆಟ್‌ನ ಕೆಲವು ಪ್ರತಿಭಾವಂತ ಅಟಗಾರರನ್ನು ಕಡೆಗಣಿಸಿದ್ದಾರೆ. ಕೆಲವು ಆಟಗಾರರ ಪರವಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದರು.

ಪಾಕಿಸ್ತಾನದ ಪರ ಆಡಿರುವ ಓರ್ವ ಲೆಜೆಂಡರಿ ಬ್ಯಾಟರ್ ಆಗಿರುವ ಯೂಸುಫ್ 90 ಟೆಸ್ಟ್, 288 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಿದ್ದರು. 39 ಶತಕ ಹಾಗೂ 97 ಅರ್ಧಶತಕಗಳ ಸಹಿತ 17,000ಕ್ಕೂ ಅಧಿಕ ಅಂತರ್‌ರಾಷ್ಟ್ರೀಯ ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News