ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆ; ಪಂಚಕುಲದಿಂದ ಬೆಂಗಳೂರಿಗೆ ಸ್ಥಳಾಂತರ

ನೀರಜ್ ಚೋಪ್ರಾ | PC : PTI
ಹೊಸದಿಲ್ಲಿ: ಪಂಚಕುಲದಲ್ಲಿ ಮೇ 24ರಂದು ನಿಗದಿಯಾಗಿದ್ದ ಬಹು ನಿರೀಕ್ಷಿತ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಾವೆಲಿನ್ ಥ್ರೋ ತಾರೆ, ಸಂಘಟಕ ನೀರಜ್ ಚೋಪ್ರಾ ತಿಳಿಸಿದ್ದಾರೆ.
ಚೊಚ್ಚಲ ಆವೃತ್ತಿಯ ಸ್ಪರ್ಧೆಯಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಥಾಮಸ್ ರೋಹ್ಲರ್ ಸೇರಿದಂತೆ ಹಲವು ತಾರೆಯರು ಭಾಗವಹಿಸಲಿದ್ದಾರೆ. ಪಂಚಕುಲದ ತಾವೂ ದೇವಿಲಾಲ್ ಕ್ರೀಡಾಂಗಣದಲ್ಲಿ ನೇರ ಪ್ರಸಾರಕ್ಕೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಸ್ಥಳಾಂತರಿಸಲಾಗಿದೆ. ಈ ಸ್ಪರ್ಧೆಗೆ ವಿಶ್ವ ಅತ್ಲೆಟಿಕ್ಸ್‌ನಿಂದ ‘ಎ’ ಕೆಟಗರಿ ದೊರೆಕಿದ್ದು, ತನ್ನ ಈವೆಂಟ್ ಕ್ಯಾಲೆಂಡರ್ ನಲ್ಲಿಯೂ ಸ್ಥಳ ಬದಲಾವಣೆ ಮಾಡಿದೆ.
‘‘ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಗ್ರೆನೆಡಾದ ಪೀಟರ್ಸ್, ಜರ್ಮನಿಯ ರೋಹ್ಲರ್, ರಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೆತ ಕೀನ್ಯದ ಜೂನಿಯಸ್ ಯೆಗೊ ಹಾಗೂ ಅಮೆರಿಕದ ಕರ್ಟಿಸ್ ಥಾಂಪ್ಸನ್ ಅವರು ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ ಅವರನ್ನೂ ಆಹ್ವಾನಿಸಲಾಗಿದೆ’’ ಎಂದು ಚೋಪ್ರಾ ಹೇಳಿದ್ದಾರೆ.